

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆಗೆ ದೊಡ್ಡ ಹಿನ್ನಡೆಯಾಗಿದ್ದು, ಮಾಜಿ ಕಾರ್ಪೊರೇಟರ್ ಮತ್ತು ಪಕ್ಷದ ನಾಯಕ ದಿ. ಅಭಿಷೇಕ್ ಘೋಸಾಲ್ಕರ್ ಅವರ ಪತ್ನಿ ತೇಜಸ್ವಿ ಘೋಸಾಲ್ಕರ್ ಅವರು ಸೋಮವಾರ ಮುಂಬೈನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ.
ಶಿವಸೇನೆ(ಯುಬಿಟಿ) ಹಿರಿಯ ನಾಯಕ ವಿನೋದ್ ಘೋಸಾಲ್ಕರ್ ಅವರ ಸೊಸೆ ತೇಜಸ್ವಿ ಘೋಸಲ್ಕರ್ ಅವರು ಇಂದು ಬಿಜೆಪಿ ಮುಂಬೈ ಘಟಕದ ಮುಖ್ಯಸ್ಥ ಅಮೀತ್ ಸತಮ್ ಮತ್ತು ಎಂಎಲ್ ಸಿ ಪ್ರವೀಣ್ ದಾರೇಕರ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಫೆಬ್ರವರಿ 2024 ರಲ್ಲಿ ಕ್ಯಾಮೆರಾದಲ್ಲಿ ನೇರಪ್ರಸಾರದಲ್ಲಿ ಸೆರೆಯಾದ ಆಘಾತಕಾರಿ ಕೊಲೆಯಲ್ಲಿ, ಅಭಿಷೇಕ್ ಘೋಸಾಲ್ಕರ್ ಅವರನ್ನು 'ಫೇಸ್ ಬುಕ್ ಲೈವ್ ನಲ್ಲಿ ಇರುವಾಗಲೇ ಮೌರಿಸ್ ನೊರೋನ್ಹಾ ಎಂಬ ವ್ಯಕ್ತಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಘೋಸಾಲ್ಕರ್ ಮತ್ತು ನೊರೋನ್ಹಾ ನಡುವೆ ಹಲವಾರು ವಿಷಯಗಳಲ್ಲಿ ದೀರ್ಘಕಾಲದಿಂದ ವಿವಾದಗಳಿದ್ದವು.
ಬಹು ನಿರೀಕ್ಷಿತ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೂ ಮುನ್ನ ತೇಜಸ್ವಿ ಘೋಸಾಲ್ಕರ್ ಅವರು ಬಿಜೆಪಿ ಸೇರಿರುವುದು ಶಿವಸೇನೆ(ಯುಬಿಟಿ)ಗೆ ಭಾರೀ ಹಿನ್ನಡೆಯಾಗಿದೆ.
ಬಿಜೆಪಿ ಸೇರಿದ ಬಳಿಕ ಮಾತನಾಡಿದ ತೇಜಸ್ವಿ ಅವರು, ಶಿವಸೇನೆ(ಯಬಿಟಿ)ಯಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ಹೊಸ ಪಕ್ಷದಲ್ಲೂ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
Advertisement