

ಜೈಪುರ: ಕೇಂದ್ರ ಚುನಾವಣಾ ಆಯೋಗ ಇದೇ ವರ್ಷದ ಜೂನ್-ಜುಲೈ ತಿಂಗಳಲ್ಲಿ ಬಿಹಾರದಲ್ಲಿ ನಡೆಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವೇಳೆಯಲ್ಲಿ ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿತ್ತು.
7.89 ಕೋಟಿ ಮತದಾರರ ಪೈಕಿ ಸುಮಾರು 65 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿತ್ತು. ಇದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಪಶ್ಚಿಮ ಬಂಗಾಳದಲ್ಲೂ SIR ಬಳಿಕ ಚುನಾವಣಾ ಆಯೋಗ ಪ್ರಕಟಿಸಿದ ಮತದಾರರ ಪಟ್ಟಿಗೆ ಟಿಎಂಸಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.
ಇದೀಗ ರಾಜಸ್ಥಾನದಲ್ಲೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವೇಳೆ ಸುಮಾರು 42 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ನವೀನ್ ಮಹಾಜನ್ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
5.46 ಕೋಟಿ ಮತದಾರರಲ್ಲಿ 41.85 ಲಕ್ಷ ಮತದಾರರು ಸಾವನ್ನಪ್ಪಿಬರಬಹುದು, ಅಥವಾ ಶಾಶ್ವತವಾಗಿ ವಲಸೆ, ಸ್ಥಳಾಂತರವಾಗಿರಬಹುದು ಅಥವಾ ಪರಿಷ್ಕರಣೆ ವೇಳೆಯಲ್ಲಿ ಗೈರುಹಾಜರಾಗಿದ್ದರಿಂದ ಅವರ ಎಣಿಕೆಯ ನಮೂನೆಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಇವರಲ್ಲದೆ ಸುಮಾರು 11 ಲಕ್ಷ ಮತದಾರರಿಗೆ ದಾಖಲೆಗಳನ್ನು ಕೋರಿ ನೋಟಿಸ್ ನೀಡಲಾಗುವುದು ಎಂದರು.
ಜೈಪುರದಲ್ಲಿ ಅತಿ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಸದ್ಯ ನಡೆಯುತ್ತಿರುವ SIR ಭಾಗವಾಗಿ ರಾಜಸ್ಥಾನ ಸೇರಿದಂತೆ ಮೂರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.
Advertisement