

ನವದೆಹಲಿ: ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ 26 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ತಿಳಿಸಿದೆ. ರಷ್ಯಾದ ಕಡೆಯಿಂದ ಏಳು ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, 50 ವ್ಯಕ್ತಿಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.
ಮೃತ 10 ಭಾರತೀಯ ಪ್ರಜೆಗಳ ಶವಗಳನ್ನು ಭಾರತಕ್ಕೆ ಹಿಂದಿರುಗಿಸಲು ಮತ್ತು ಇಬ್ಬರು ಭಾರತೀಯ ಪ್ರಜೆಗಳ ಸ್ಥಳೀಯ ಶವಸಂಸ್ಕಾರಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೆರವು ನೀಡಿದೆ ಎಂದು ಅವರು ಮಾಹಿತಿ ನೀಡಿದರು.
ಮೃತಪಟ್ಟ ಕೆಲವು ಭಾರತೀಯ ಪ್ರಜೆಗಳ ಗುರುತನ್ನು ಪತ್ತೆಗಾಗಿ 18 ಭಾರತೀಯರ ಕುಟುಂಬ ಸದಸ್ಯರ ಡಿಎನ್‌ಎ ಮಾದರಿಗಳನ್ನು ರಷ್ಯಾದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
2022 ರಿಂದ ರಷ್ಯಾ ಸೇನೆಯಲ್ಲಿ ಅಕ್ರಮವಾಗಿ ಅಥವಾ ಬಲವಂತದಿಂದ ಕೆಲಸ ಮಾಡುತ್ತಿರುವ ಭಾರತೀಯ ಪ್ರಜೆಗಳು, ಅವರಲ್ಲಿ ಮೃತಪಟ್ಟವರು ಅಥವಾ ನಾಪತ್ತೆಯಾದವರ ಕುರಿತು ಮಾಹಿತಿ ಕೇಳಲಾಗಿತ್ತು.
ಪ್ರಸ್ತುತ ರಷ್ಯಾದ ಸೈನ್ಯದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಪ್ರಜೆಗಳು ಮತ್ತು ಅವರ ವಾಪಸಾತಿಗಾಗಿ ಸಚಿವಾಲಯ ಮತ್ತು ರಷ್ಯಾ ನಡುವೆ ನಡೆದಿಕುವ ಮಾತುಕತೆ ದಿನಾಂಕಗಳು ಮತ್ತು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಭಾರತೀಯರ ಮೃತದೇಹವನ್ನು ಇನ್ನೂ ಸ್ವದೇಶಕ್ಕೆ ಹಿಂದಿರುಗಿಸಬೇಕಾಗಿದೆಯೇ ಮತ್ತು ಹಾಗಿದ್ದಲ್ಲಿ, ವಿಳಂಬಕ್ಕೆ ಕಾರಣಗಳ ಬಗ್ಗೆ ಸರ್ಕಾರವನ್ನು ಕೇಳಲಾಗಿತ್ತು.
Advertisement