

ನವದೆಹಲಿ: 'ಆಪರೇಷನ್ ಸಿಂಧೂರ' ಕುರಿತ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಹೇಳಿಕೆಯನ್ನು ದೇಶ ವಿರೋಧಿ ಎಂದಿರುವ ಬಿಜೆಪಿ, ಭಾರತೀಯ ಸೇನೆಯನ್ನು ಅವಮಾನಿಸಿದ್ದಕ್ಕಾಗಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ.
ಅಲ್ಲದೇ ಪೃಥ್ವಿರಾಜ್ ಚವಾಣ್ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ.
ಮೇ 7 ರಂದು ನಡೆದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಮೊದಲ ದಿನ ಪಾಕಿಸ್ತಾನ ಸೇನೆ ಜೊತೆಗಿನ ವೈಮಾನಿಕ ಸಂಘರ್ಷದಲ್ಲಿ ಭಾರತ ಸಂಪೂರ್ಣವಾಗಿ ಸೋಲನ್ನು ಎದುರಿಸಿತ್ತು ಎಂದು ಚವಾಣ್ ಮಂಗಳವಾರ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನಾ ಕಾರ್ಯಾಚರಣೆಯ ಕುರಿತು ನೀಡಿದ ಹೇಳಿಕೆಗೆ ಕ್ಷಮೆಯಾಚಿಸಲು ಅವರು ನಿರಾಕರಿಸಿದ್ದಾರೆ.
ಈ ಕುರಿತು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಸೈಯದ್ ಜಾಫರ್ ಇಸ್ಲಾಂ, ಚವಾಣ್ ವಿರುದ್ಧ ವಾಗ್ದಾಳಿ ನಡೆಸಿದರು, ಅವರ ಹೇಳಿಕೆಗಳು ದೇಶ ವಿರೋಧಿಯಾಗಿದ್ದು, ಕಾಂಗ್ರೆಸ್ ನಾಯಕರು ಕೂಡಾ ಏನನ್ನೂ ಮಾತನಾಡುತ್ತಿಲ್ಲ. ಇದು ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಚವಾಣ್ ಅವರ ಹೇಳಿಕೆಗೆ ದೇಶದ ಕ್ಷಮೆಯಾಚಿಸಿ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಮನವಿ ಮಾಡುತ್ತೇವೆ ಎಂದು ಇಸ್ಲಾಂ ಹೇಳಿದರು.
Advertisement