

ಮುಂಬೈ: ಮುಂಬೈನ ಬಾಂದ್ರಾ-ವರ್ಲಿ ಸೀ ಲಿಂಕ್ ನಲ್ಲಿ ಗಂಟೆಗೆ 252 ಕಿ.ಮೀ ವೇಗದಲ್ಲಿ ಲಾಂಬೋರ್ಘಿನಿ ಕಾರು ಚಾಲನೆ ಮಾಡಿದ ಚಾಲಕನ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಮತ್ತು ಲಾಂಬೋರ್ಘಿನಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಡಿಸೆಂಬರ್ 12 ರಂದು ಈ ಘಟನೆ ನಡೆದಿದ್ದು, ಕಾರು ಚಾಲಕನ ಅಜಾಗರೂಕ ಕೃತ್ಯವನ್ನು ತೋರಿಸುವ ವಿಡಿಯೋ ವೈರಲ್ ಆದ ನಂತರ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಚಾಲಕನನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
"ಐಷಾರಾಮಿ ಸ್ಪೋರ್ಟ್ಸ್ ಕಾರಿನೊಳಗೆ ಚಿತ್ರೀಕರಿಸಲಾದ ವಿಡಿಯೋದಲ್ಲಿ, ಸೀ ಲಿಂಕ್ ನ ದಕ್ಷಿಣ ತುದಿಯ ಕಡೆಗೆ ಹೋಗುವಾಗ, ಇತರ ವಾಹನಗಳನ್ನು ಹಿಂದಿಕ್ಕುವಾಗ ಲಾಂಬೋರ್ಘಿನಿ ಸ್ಪೀಡೋಮೀಟರ್ ಗಂಟೆಗೆ 252 ಕಿ.ಮೀ ವೇಗವನ್ನು ತಲುಪುತ್ತಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ ಪೊಲೀಸ್ ಅಧಿಕಾರಿಗಳು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅದೇ ಕಾರು ಹಲವು ಬಾರಿ ವೇಗ ಮಿತಿಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಮತ್ತು ಅದರ ವಿರುದ್ಧ ಹಲವಾರು ಸಂಚಾರಿ ನಿಯಮ ಉಲ್ಲಂಘನೆ ಚಲನ್‌ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಸೀ ಲಿಂಕ್ ನಲ್ಲಿ ಕಾರುಗಳ ವೇಗ ಮಿತಿ ಗಂಟೆಗೆ 80 ಕಿ.ಮೀ ಆಗಿರುವುದರಿಂದ, ಈ ಸ್ಪೋರ್ಟ್ಸ್ ಕಾರಿನ ಚಾಲಕ ವೇಗ ಮಿತಿ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕ ರಸ್ತೆಗಳಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಕಾರು ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 281 ಮತ್ತು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಮಧ್ಯ ಮುಂಬೈನ ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
Advertisement