

ಕೋಲ್ಕತ್ತಾ: ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಫ್ಯಾನ್ಸ್ ದಾಂಧಲೆ ಮತ್ತು ಅವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಮುಖ ಆಯೋಜಕ ಸತಾದ್ರು ದತ್ತಾ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ವಿಚಾರಣೆ ವೇಳೆ ಡಿಸೆಂಬರ್ 13 ರಂದು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಕ್ರೀಡಾಂಗಣಕ್ಕೆ ಆಗಮಿಸಿದ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ಹೊರಟುಹೋದರು. ಇದರಿಂದಾಗಿ ಅವ್ಯವಸ್ಥೆ ಮತ್ತು ದಾಂಧಲೆಯಾಯಿತು. ಕೆಲವರು ಮೆಸ್ಸಿ ಅವರನ್ನು "ಟಚ್ ಮಾಡಿದ್ದರಿಂದ ಮತ್ತು ಅಪ್ಪಿಕೊಂಡಿದ್ದರಿಂದ ಅವರು ಆಕ್ರೋಶಗೊಂಡು ಅಲ್ಲಿಂದ ತೆರಳಿದರು" ಎಂದು ದತ್ತಾ ಅವರು ಎಸ್ ಐಟಿಗೆ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಎಸ್‌ಐಟಿಯ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದ್ದು, "ಅತ್ಯಂತ ಪ್ರಭಾವಿ ವ್ಯಕ್ತಿ"ಯೊಬ್ಬರು ಕ್ರೀಡಾಂಗಣಕ್ಕೆ ಆಗಮಿಸಿದ ನಂತರ ಗ್ರೌಂಡ್ ಪಾಸ್‌ಗಳ ಸಂಖ್ಯೆಯನ್ನು ಮೂರುಪಟ್ಟು ಹೆಚ್ಚಿಸಲಾಯಿತು. ಹೀಗಾಗಿ ಕಾರ್ಯಕ್ರಮವು ಅವ್ಯವಸ್ಥೆ ಮತ್ತು ಹಿಂಸಾಚಾರದಲ್ಲಿ ಕೊನೆಗೊಂಡಿತು ಎಂದು ದತ್ತಾ ಬಹಿರಂಗಪಡಿಸಿದ್ದಾರೆ.
"ಪ್ರಭಾವಿ ವ್ಯಕ್ತಿ" ಕ್ರೀಡಾಂಗಣವನ್ನು ಪ್ರವೇಶಿಸಿದ ನಂತರ, ಕಾರ್ಯಕ್ರಮದ ಸಂಪೂರ್ಣ ಫ್ಲೋಚಾರ್ಟ್ ತೊಂದರೆಗೀಡಾಯಿತು ಮತ್ತು ಅಭಿಮಾನಿಗಳನ್ನು ನಿಯಂತ್ರಿಸಲು ತಮಗೆ ಸಾಧ್ಯವಾಗಲಿಲ್ಲ ಎಂದು ಆಯೋಜಕರು ಹೇಳಿದ್ದಾರೆ.
ಮೆಸ್ಸಿಗೆ "ತನ್ನ ಬೆನ್ನನ್ನು ಮುಟ್ಟುವುದು ಅಥವಾ ಅಪ್ಪಿಕೊಳ್ಳುವುದು ಇಷ್ಟವಿಲ್ಲ" ಮತ್ತು ಫುಟ್ಬಾಲ್ ಆಟಗಾರನ ರಕ್ಷಣೆಗೆ ಆಗಮಿಸಿದ್ದ ವಿದೇಶಿ ಭದ್ರತಾ ಅಧಿಕಾರಿಗಳು ಈ ಕಳವಳವನ್ನು ಮುಂಚಿತವಾಗಿ ತಿಳಿಸಿದ್ದರು ಎಂದು ದತ್ತಾ ತನಿಖಾಧಿಕಾರಿಗಳಿಗೆ ಹೇಳಿದ್ದಾರೆ.
"ಜನಸಮೂಹವನ್ನು ನಿಯಂತ್ರಿಸಲು ಪದೇ ಪದೇ ಸಾರ್ವಜನಿಕ ಘೋಷಣೆಗಳನ್ನು ಮಾಡಿದರೂ, ಯಾವುದೇ ಪರಿಣಾಮ ಬೀರಲಿಲ್ಲ. ಮೆಸ್ಸಿಯನ್ನು ಸುತ್ತುವರೆದು ಅಪ್ಪಿಕೊಂಡ ರೀತಿ ವಿಶ್ವಕಪ್ ವಿಜೇತ ಫುಟ್ಬಾಲ್ ಆಟಗಾರನಿಗೆ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ದತ್ತ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರಂಭದಲ್ಲಿ ಕೇವಲ 150 ಗ್ರೌಂಡ್ ಪಾಸ್‌ಗಳನ್ನು ನೀಡಲಾಗಿತ್ತು. ಮೆಸ್ಸಿ ಕ್ರೀಡಾಂಗಣಕ್ಕೆ ಆಗಮಿಸಿದಾಗ ಅದು ಮೂರು ಪಟ್ಟು ಹೆಚ್ಚಾಯಿತು ಎಂದು ದತ್ತ ಹೇಳಿದ್ದಾರೆ.
Advertisement