

ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ(ಯುಬಿಟಿ) ಮುಂಬರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಯತ್ನಿಸುತ್ತಿದೆ.
ಈ ಸಂಬಂಧ ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಿದ್ದು, ಜನವರಿ 15, 2026 ರಂದು ನಡೆಯಲಿರುವ ಬಿಎಂಸಿ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವಂತೆ ವಿನಂತಿಸಿದ್ದಾರೆ.
ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ, ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 41 ನಗರ ಪಂಚಾಯತ್ ಅಧ್ಯಕ್ಷ ಸ್ಥಾನಗಳನ್ನು ಗೆದ್ದ ನಂತರ, ಕಾಂಗ್ರೆಸ್ ತನ್ನ ಕಾರ್ಯತಂತ್ರದ ಬಗ್ಗೆ ವಿಶ್ವಾಸ ಹೆಚ್ಚಿಸಿಕೊಂಡಿದ್ದು, ಏಷ್ಯಾದ ಅತಿದೊಡ್ಡ ಮಹಾನಗರ ಪಾಲಿಕೆಯಾದ ಬಿಎಂಸಿ ಚುನಾವಣೆಯಲ್ಲೂ ಅದೇ ಕಾರ್ಯತಂತ್ರ ರೂಪಿಸಿದೆ.
ಬಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತವಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದೆ. ಆದರೆ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದ ನಂತರ ಆತಂಕಗೊಂಡಿರುವ ಶಿವಸೇನೆ(ಯುಬಿಟಿ), ಮತಗಳ ವಿಭಜನೆಯನ್ನು ತಪ್ಪಿಸಲು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚಿಂತಿಸುತ್ತಿದೆ.
ಕಳೆದ 25 ವರ್ಷಗಳಿಂದ ಬಿಎಂಸಿ ಬಿಎಂಸಿಯನ್ನು ನಿಯಂತ್ರಿಸುತ್ತಿರುವ ಶಿವಸೇನೆ(ಯುಬಿಟಿ), ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಸೋಲು ಪಾಲಿಕೆಯನ್ನು ಉಳಿಸಿಕೊಳ್ಳುವ ಭರವಸೆಯನ್ನು ಕುಗ್ಗಿಸಿದೆ. ಇದರಿಂದಾಗಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಮೈತ್ರಿಕೂಟದ ಭಾಗವಾಗಬೇಕು ಎಂಬ ಸಂದೇಶದೊಂದಿಗೆ ಸಂಜಯ್ ರಾವತ್ ರಾಹುಲ್ ಗಾಂಧಿಗೆ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಆದಾಗ್ಯೂ, ಮುಂಬೈನಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಅವರು ದೃಢನಿಶ್ಚಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. "ಕಳೆದ ಎರಡು ಚುನಾವಣೆಗಳಲ್ಲಿ, ಕಾಂಗ್ರೆಸ್ ಮತಗಳು ಸುಲಭವಾಗಿ ಶಿವಸೇನೆ(ಯುಬಿಟಿ)ಗೆ ವರ್ಗಾವಣೆಯಾಗುವುದನ್ನು ನಾವು ನೋಡಿದ್ದೇವೆ. ಆದರೆ ಸೇನಾ ಮತಗಳು ನಮಗೆ ಬರುವುದಿಲ್ಲ. ಅದು ಬಿಜೆಪಿ ಅಥವಾ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಹೋಗುತ್ತವೆ. ಆದ್ದರಿಂದ, ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುವುದು ಮತ್ತು ಪ್ರತಿಯೊಬ್ಬರ ಮತ ಬ್ಯಾಂಕ್ ಅನ್ನು ಉಳಿಸಿಕೊಳ್ಳುವುದು ಉತ್ತಮ" ಎಂದು ಅವರು ಹೇಳಿದ್ದಾರೆ.
"ಬಿಎಂಸಿ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರವನ್ನು ಬದಲಾಯಿಸುವಂತೆ ರಾಹುಲ್ ಗಾಂಧಿ ನಮಗೆ ಸೂಚಿಸುವುದಿಲ್ಲ ಎಂಬ ವಿಶ್ವಾಸವಿದೆ" ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
Advertisement