

ನವದೆಹಲಿ: ವಿದೇಶ ಪ್ರವಾಸದಲ್ಲಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಜೆಪಿ ದೇಶದ ಸಾಂಸ್ಥಿಕ ರಚನೆಯನ್ನು ಸ್ವಾಧೀನಪಡಿಸಿಕೊಂಡಿದೆ. ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ ಎಂದು ಕರೆದಿದ್ದು ಇದಕ್ಕೆ ಬಿಜೆಪಿ ತೀವ್ರವಾಗಿ ಟೀಕಿಸಿದೆ. ಬರ್ಲಿನ್‌ನಲ್ಲಿ ರಾಹುಲ್ ಗಾಂಧಿ (Rahul Gandhi) ಮಾಡಿದ ಭಾಷಣವನ್ನು ಟೀಕಿಸಿದ ಬಿಜೆಪಿ, ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಮತ್ತು ಅಶಾಂತಿಯನ್ನು ಹರಡಲು ಬಯಸುತ್ತದೆ ಎಂದು ಹೇಳಿದೆ. ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ರಾಹುಲ್ ಗಾಂಧಿಯವರ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತದ ವಿರುದ್ಧ ಹೋರಾಡುವುದರಿಂದ ಹಿಡಿದು ಅರಾಜಕತೆಗೆ ಕರೆ ನೀಡುವವರೆಗೆ, ರಾಹುಲ್ ಗಾಂಧಿಯ ಸೈದ್ಧಾಂತಿಕ ಮಾರ್ಗದರ್ಶಕ ಜಾರ್ಜ್ ಸೊರೊಸ್ ಜೊತೆ ಸೇರಿ ಕಾಂಗ್ರೆಸ್ ಭಾರತೀಯ ಪ್ರಜಾಪ್ರಭುತ್ವದಲ್ಲಿ ಅರಾಜಕತೆ ಮತ್ತು ಅಶಾಂತಿಯನ್ನು ಸೃಷ್ಟಿಸಲು ಬಯಸುತ್ತದೆ ಎಂದರು.
ರಾಹುಲ್ ಗಾಂಧಿ ಅಂತಹ ಭಾರತ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ವಿದೇಶಕ್ಕೆ ಹೋಗುತ್ತಾರೆ. ಕಾಂಗ್ರೆಸ್ ಭಾರತೀಯ ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತದೆ. ಕಾಂಗ್ರೆಸ್ ಭಾರತದ ಪ್ರಗತಿಯನ್ನು ದ್ವೇಷಿಸುತ್ತದೆ. ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಲ್ಲ, ಬದಲಾಗಿ ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ಮಾತನಾಡುವ ಭಾರತ ವಿರೋಧಿ ನಾಯಕ. ಆದರೆ ಹೀಗೆ ಮಾಡುವುದರಿಂದ ಅವರು ಏನನ್ನು ಸಾಧಿಸಲು ಬಯಸುತ್ತಾರೆ? ಅವರು ಇನ್ನೂ ಬಾಲಕನಂತೆ ವರ್ತಿಸುತ್ತಿದ್ದಾರೆ. ಅವರು ನಾಯಕನಲ್ಲ ಎಂದು ಪ್ರದೀಪ್ ಭಂಡಾರಿ ಬರೆದಿದ್ದಾರೆ.
ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ ಕೂಡ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಮತ್ತೊಮ್ಮೆ ತಾವು ವಿರೋಧ ಪಕ್ಷದ ನಾಯಕರಲ್ಲ, ಬದಲಿಗೆ ಪ್ರಚಾರದ ನಾಯಕ ಮತ್ತು ಪಲಾಯನದ ನಾಯಕ ಎಂದು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು. ರಾಹುಲ್ ಗಾಂಧಿ ನಮ್ಮ ದೇಶವನ್ನು ಅವಮಾನಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಬರ್ಲಿನ್‌ನಲ್ಲಿ ಭಾರತದ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭಾರತದಲ್ಲಿ ಯಾವುದೂ ನ್ಯಾಯಯುತವಾಗಿಲ್ಲ ಎಂದು ಆರೋಪಿಸುತ್ತಾರೆ ಎಂದರು.
ಬರ್ಲಿನ್‌ನ ಹರ್ಟೀ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ದೇಶದ ಸಾಂಸ್ಥಿಕ ರಚನೆಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಿದರು. ರಾಹುಲ್ ಗಾಂಧಿ ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ. ಬಿಜೆಪಿ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳನ್ನು ಅಸ್ತ್ರಗಳಾಗಿ ಬಳಸುತ್ತಿದ್ದು ಇದು ಬಿಜೆಪಿಗೆ ನೇರವಾಗಿ ಲಾಭ ತರುತ್ತಿದೆ ಎಂದು ಆರೋಪಿಸಿದ್ದರು.
Advertisement