

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಅವರು ಬಹಿರಂಗವಾಗಿ ಬಿಜೆಪಿ ಹಾಗೂ ಅದರ ಮಾರ್ಗದರ್ಶಕ ಸಂಸ್ಥೆಯಾದ ಆರ್ ಎಸ್ ಎಸ್ ಹೊಗಳಿರುವುದು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಪಕ್ಷದಲ್ಲಿನ ಆಂತರಿಕ ಸುಧಾರಣೆಗಳ ಅಗತ್ಯವನ್ನು ರಾಹುಲ್ ಗಾಂಧಿಗೆ ಸೂಚಿಸಿದ ಒಂದು ವಾರದ ನಂತರ ಈ ಹೇಳಿಕೆ ನೀಡುವ ಮೂಲಕ ದಿಗ್ವಿಜಯ ಸಿಂಗ್ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
1990ರ ದಶಕದ ಪ್ರಧಾನಿ ನರೇಂದ್ರ ಮೋದಿಯವರ ಬ್ಲ್ಯಾಕ್ ಅಂಡ್ ವೈಟ್ ಫೋಟೋವನ್ನು ಶನಿವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಅವರು, ವಿವಿಧ ವಿಷಯಗಳ ಕುರಿತು ಕಾಂಗ್ರೆಸ್ ನ್ನು ಗುರಿಯಾಗಿಸಿ, ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ನ್ನು ಹೊಗಳಿದ್ದಾರೆ.
ಗುಜರಾತ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಹಿರಿಯ ಎಲ್ ಕೆ ಅಡ್ವಾಣಿ ಅವರ ಬಳಿ ಯುವ ನರೇಂದ್ರ ಮೋದಿ ಅವರು ನೆಲದ ಮೇಲೆ ಕುಳಿತಿರುವುದನ್ನು ತೋರಿಸುವ ಸ್ಕ್ರೀನ್ ಶಾಟ್ ನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಡ್ವಾಣಿ ಬಳಿ ನೆಲದ ಮೇಲೆ ಕುಳಿತಿರುವ ಮೋದಿ ಅವರನ್ನು ಉಲ್ಲೇಖಿಸಿ, ಒಮ್ಮೆ ನೆಲದ ಮೇಲೆ ಕುಳಿತಿದ್ದ ತಳಮಟ್ಟದ ಕಾರ್ಯಕರ್ತರು ಸಂಘ-ಬಿಜೆಪಿ ಪರಿಸರ ವ್ಯವಸ್ಥೆಯೊಳಗೆ ಹೇಗೆ ಬೆಳೆದು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಬಹುದು ಎಂಬುದನ್ನು ಶ್ಲಾಘಿಸಿದ್ದಾರೆ. ಕೊನೆಯಲ್ಲಿ ಜೈ ಶಿಯಾ ರಾಮ್ ಎಂದು ಪೋಸ್ಟ್ ಮಾಡಿದ್ದರು.
ಈ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಈ ಪೋಸ್ಟ್ ನ್ನು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಬಳಸಿಕೊಂಡಿದೆ. ಸಿಂಗ್ ಅವರ ಟ್ವೀಟ್ ಕಾಂಗ್ರೆಸ್ ನ ನಿರಂಕುಶ ಮತ್ತು ಪ್ರಜಾಪ್ರಭುತ್ವ ವಿರೋಧಿ" ಆಂತರಿಕ ಕಾರ್ಯಚಟುವಟಿಕೆಯನ್ನು ಬಹಿರಂಗಪಡಿಸುವ "ಸತ್ಯದ ಬಾಂಬ್" ಎಂದು ಬಿಜೆಪಿ ವಕ್ತಾರ ಸಿಆರ್ ಕೇಶವನ್ ಹೇಳಿದ್ದಾರೆ.
"ರಾಹುಲ್ ಗಾಂಧಿ ಧೈರ್ಯ ತೋರಿಸುತ್ತಾರೆಯೇ ಮತ್ತು ಈ ಆಘಾತಕಾರಿ ಸತ್ಯ ಬಾಂಬ್‌ಗೆ ಪ್ರತಿಕ್ರಿಯಿಸುತ್ತಾರೆಯೇ ಎಂದು ಕೇಶವನ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಶ್ನಿಸಿದ್ದಾರೆ
ಸಿಂಗ್ ಅವರ ಪೋಸ್ಟ್ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪಕ್ಷದ ಹೈಕಮಾಂಡ್‌ಗೆ ಸಂದೇಶದ ರೀತಿಯಲ್ಲಿ ನೋಡಲಾಗುತ್ತಿದೆ. ಅವರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಲ್ಲದೇ ಅಧಿಕೃತ ಕಾಂಗ್ರೆಸ್ ಎಕ್ಸ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿದ್ದಾರೆ. ಪಕ್ಷದ ಸುಧಾರಣೆಯನ್ನು ಒತ್ತಿ ಹೇಳಲು ಈ ರೀತಿಯ ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಡಿಸೆಂಬರ್ 19 ರಂದು ಪಕ್ಷದೊಳಗೆ ಸುಧಾರಣೆ ಕುರಿತು ರಾಹುಲ್ ಗಾಂಧಿಯನ್ನು ಒತ್ತಾಯಿಸುವ ಪೋಸ್ಟ್ ಒಂದನ್ನು ರಾಹುಲ್ ಗಾಂಧಿಗೆ ಮಾಡಿದ್ದರು. ಆಂತರಿಕ ಬದಲಾವಣೆಗಳ ಬಗ್ಗೆ ರಾಹುಲ್ ಗಾಂಧಿಗೆ ಮನವರಿಕೆ ಮಾಡುವುದು ಅಷ್ಟು ಸುಲಭವಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಬಾಹ್ಯವಾಗಿ ಬೋಧಿಸುತ್ತದೆ ಆದರೆ ಆಂತರಿಕವಾಗಿ ಅದನ್ನು ಅನುಸರಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿಯ ಟೀಕೆಗಳನ್ನು ದಿಗ್ವಿಜಯ್ ಸಿಂಗ್ ಉಲ್ಲೇಖಿಸಿದ್ದರು.
ಮತ್ತೊಬ್ಬ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಸಿಂಗ್ ಅವರ ಪೋಸ್ಟ್ ಬಹಿರಂಗ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
Advertisement