

ರಾಯಪುರ: ಮಧ್ಯಪ್ರದೇಶದ ಛತ್ತಾರ್ಪುರದ ಬಾಗೇಶ್ವರ ಧಾಮದ ಮುಖ್ಯಸ್ಥ, ಸ್ವಯಂಘೋಷಿತ ದೇವಮಾನವ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಸರ್ಕಾರಿ ವಿಮಾನವೊಂದರಲ್ಲಿ ಛತ್ತೀಸ್‌ಗಢಕ್ಕೆ ಬಂದಾಗ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು ಅವರ ಪಾದಗಳಿಗೆ ಎರಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಆದಾಗ್ಯೂ ಬಿಜೆಪಿ, ಇದು ಪೊಲೀಸ್ ಅಧಿಕಾರಿ. 'ವೈಯಕ್ತಿಕ ನಂಬಿಕೆ' ಎಂದು ಸಮರ್ಥಿಸಿಕೊಂಡಿದ್ದರೆ, ಇದು ಸನಾತನ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಪ್ರತಿಪಕ್ಷ ಆರೋಪಿಸಿದೆ.
ಶಾಸ್ತ್ರಿ ಅವರು ರಾಜ್ಯ ಸಚಿವ ಗುರು ಖುಷ್ವಂತ್ ಸಾಹೇಬ್ ಅವರೊಂದಿಗೆ ದುರ್ಗ ಜಿಲ್ಲೆಯ ಭಿಲಾಯ್ ಪಟ್ಟಣದಲ್ಲಿ ಆಯೋಜಿಸಿದ್ದ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕಾಗಿ ಗುರುವಾರ ರಾಯಪುರಕ್ಕೆ ಆಗಮಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿರುವ ಕ್ಲಿಪ್ ನಲ್ಲಿ, ಶಾಸ್ತ್ರಿ ಮತ್ತು ಸಚಿವರು ವಿಮಾನದಿಂದ ಇಳಿಯುತ್ತಿರುವುದನ್ನು ಕಾಣಬಹುದು. ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿ ಮೊದಲಿಗೆ ಸೆಲ್ಯೂಟ್ ಮಾಡುತ್ತಾರೆ. ನಂತರ ಅವರು ಕ್ಯಾಪ್ ಮತ್ತು ಬೂಟುಗಳನ್ನು ತೆಗೆದು ಕೃಷ್ಣ ಶಾಸ್ತ್ರಿ 'ಪಾದ'ಕ್ಕೆ ಎರಗುತ್ತಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ, ಸಮವಸ್ತ್ರದಲ್ಲಿದ್ದ ಅಧಿಕಾರಿಯ ನಡವಳಿಕೆ ಮತ್ತು ಸರ್ಕಾರದ ವಿಮಾನ ಬಳಸಿದ ಬಗ್ಗೆ ಟೇಕೆಗಳು ಕೇಳಿಬರುತ್ತಿವೆ.
ಸಾರ್ವಜನಿಕರ ಹಣವನ್ನು ಸ್ವಯಂ ಘೋಷಿತ ದೇವಮಾನವನಿಗಾಗಿ ಬೇಕಾಬಿಟ್ಟಿಯಾಗಿ ಬಳಸಲಾಗಿದೆ ಎಂದು ಅನೇಕ ನೆಟ್ಟಿಗರು ಕಿಡಿಕಾರಿದ್ದಾರೆ. ರಾಜ್ಯದ ಖಜಾನೆಯನ್ನು ಇಂತಹ ಕಾರ್ಯಕ್ರಮಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Advertisement