

ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಒಡೆದು ಹೋಗಿದ್ದ ರಾಷ್ಟ್ರೀಯ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಬಣಗಳು ಪಿಂಪ್ರಿ-ಚುಂಚ್ವಾಡ್ ಪುರಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಡಿಸಿಎಂ ಅಜಿತ್ ಪವಾರ್ ಘೋಷಣೆ ಮಾಡಿದ್ದಾರೆ.
ಡಿಸಿಎಂ ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಬಣದೊಂದಿಗೆ ಮುಂಬರುವ ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ. ಇದು ಒಡೆದು ಹೋಗಿದ್ದ ಎರಡೂ ಪಕ್ಷದ ಪುನರ್ಮಿಲನ ಎನ್ನಲಾಗಿದೆ.
ಜನವರಿ 15 ರ ಚುನಾವಣೆಗೆ ಮುನ್ನ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅಜಿತ್ ಪವಾರ್, "ಈ ಪುರಸಭೆ ಚುನಾವಣೆಗಳಿಗಾಗಿ, 'ಗಡಿಯಾರ' ಮತ್ತು 'ತುತ್ತೂರಿ' (ಕಹಳೆ) ಒಟ್ಟಿಗೆ ಬಂದಿವೆ. ಪರಿವಾರ ಒಗ್ಗಟ್ಟಾಗಿದೆ" ಎಂದು ಹೇಳಿದರು.
ಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಬೇಕು ಮತ್ತು ರ್ಯಾಲಿಗಳ ಸಮಯದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
"ನಾವು ಪ್ರಗತಿಗಾಗಿ ಕೆಲಸ ಮಾಡುತ್ತಿದ್ದೇವೆ. ಪುರಸಭೆಯ ಮೇಲೆ ಸಾಲದ ಹೊರೆ ಹೊರಿಸಲು ಪ್ರಯತ್ನಿಸಿದವರನ್ನು ನಾವು ಹೊರಗೆ ತಳ್ಳುತ್ತೇವೆ" ಎಂದು ಅವರು ಹೇಳಿದರು. ಪುಣೆ ಪುರಸಭೆ ಚುನಾವಣೆಗೆ ಸಂಭಾವ್ಯ ಮೈತ್ರಿಗಾಗಿ ಎನ್‌ಸಿಪಿಯ ಎರಡು ಬಣಗಳ ನಡುವೆ ಮಾತುಕತೆ ನಡೆಯುತ್ತಿದೆ.
ಭಾನುವಾರದಂದು ಪವಾರ್ ಕುಟುಂಬವು ಬಾರಾಮತಿಯಲ್ಲಿತ್ತು, ಅಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ಶರದ್‌ಚಂದ್ರ ಪವಾರ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಉದ್ಘಾಟಿಸಿದರು.
ಪಿಂಪ್ರಿ-ಚಿಂಚ್‌ವಾಡ್ ಮತ್ತು ಪುಣೆ ಸೇರಿದಂತೆ ಮಹಾರಾಷ್ಟ್ರದಾದ್ಯಂತ 29 ಪುರಸಭೆಗಳಿಗೆ ಚುನಾವಣೆ ಜನವರಿ 15 ರಂದು ನಡೆಯಲಿದ್ದು, ಮರುದಿನ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 30 ಆಗಿದೆ.
Advertisement