ಕೇಂದ್ರ ಬಜೆಟ್ 2025: ವಿಮಾ ವಲಯದಲ್ಲಿ FDI ಮಿತಿ ಶೇ.74 ರಿಂದ ಶೇ.100ಕ್ಕೆ ಹೆಚ್ಚಳ

ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ - ಎಫ್.ಡಿ.ಐ ಮಿತಿ ಶೇ 74 ರಿಂದ ಶೇ 100ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಈ ಹೆಚ್ಚಳದ ಮಿತಿಯು ಸಂಪೂರ್ಣ ಪ್ರೀಮಿಯಂ ಭಾರತದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಲಭ್ಯವಿರುತ್ತದೆ
Nirmala Sitharaman
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ನಮ್ಮ ಬೆಳವಣಿಗೆಯ ಸಾಮರ್ಥ್ಯ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಆರು ಕ್ಷೇತ್ರಗಳಲ್ಲಿ ಪರಿವರ್ತನಾತ್ಮಕ ಸುಧಾರಣೆಗಳನ್ನು ಪ್ರಾರಂಭಿಸುವ ಗುರಿಯನ್ನು 2025-26ನೇ ಸಾಲಿನ ಬಜೆಟ್ ಹೊಂದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿ ಮಾಹಿತಿ ನೀಡಿದರು.

ಈ ಕ್ಷೇತ್ರಗಳಲ್ಲಿ ಹಣಕಾಸು ವಲಯವೂ ಒಂದಾಗಿದ್ದು, ಇದು ವಿಮೆ, ಪಿಂಚಣಿಗಳು, ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳು (ಬಿಐಟಿಎಸ್) ಮತ್ತು ಮುಂತಾದ ಕ್ಷೇತ್ರಗಳನ್ನು ಒಳಗೊಂಡಿದೆ.

ವಿಮಾ ಕ್ಷೇತ್ರದಲ್ಲಿ ಎಫ್.ಡಿ.ಐ: ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ - ಎಫ್.ಡಿ.ಐ ಮಿತಿ ಶೇ 74 ರಿಂದ ಶೇ 100ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಈ ಹೆಚ್ಚಳದ ಮಿತಿಯು ಸಂಪೂರ್ಣ ಪ್ರೀಮಿಯಂ ಭಾರತದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಲಭ್ಯವಿರುತ್ತದೆ. ವಿದೇಶಿ ಹೂಡಿಕೆಗೆ ಸಂಬಂಧಿಸಿದ ಷರತ್ತುಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಸರಳಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.

ಪಿಂಚಣಿ ವಲಯ: ಪಿಂಚಣಿ ಉತ್ಪನ್ನಗಳ ನಿಯಂತ್ರಣಕ್ಕಾಗಿ ಸಮನ್ವಯ ಮತ್ತು ಅಭಿವೃದ್ಧಿಗಾಗಿ ಒಂದು ವೇದಿಕೆಯನ್ನು ಸ್ಥಾಪಿಸಲಾಗುವುದು ಎಂದರು.

Nirmala Sitharaman
Union Budget 2025: ಸಣ್ಣ-ಮಧ್ಯಮ ಕೈಗಾರಿಕಾ ವಲಯಕ್ಕೆ ಉತ್ತೇಜನ; ಬೀದಿಬದಿ ವ್ಯಾಪಾರಿಗಳಿಗೆ ಯುಪಿಐ ಲಿಂಕ್ ಕ್ರೆಡಿಟ್ ಕಾರ್ಡ್!

ಕೆವೈಸಿ ಸರಳೀಕರಣ: 2025ರಲ್ಲಿ ನವೀಕರಿಸಿದ ಕೇಂದ್ರೀಯ ಕೆವೈಸಿ ನೋಂದಣಿ ಯೋಜನೆ ಜಾರಿಗೊಳಿಸಲಾಗುವುದು, ನಿಯಮಿತವಾಗಿ ನವೀಕರಣಕ್ಕಾಗಿ ಸುವ್ಯವಸ್ಥಿತವಾದ ವ್ಯವಸ್ಥೆಯನ್ನು ಸಹ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.

ಕಂಪೆನಿಗಳ ವಿಲೀನ: ಕಂಪನಿ ವಿಲೀನ ಪ್ರಕ್ರಿಯೆಗಳಿಗೆ ತ್ವರಿತ ಅನುಮೋದನೆ ನೀಡುವ ಕಾರ್ಯವಿಧಾನಗಳನ್ನು ತರ್ಕಬದ್ಧಗೊಳಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು. ತ್ವರಿತ ವಿಲೀನಗಳ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಮತ್ತು ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳು: ಸುಸ್ಥಿರ ವಿದೇಶಿ ಹೂಡಿಕೆಯನ್ನು ಉತ್ತೇಜಿಸಲು ಮತ್ತು “ಭಾರತದ ಅಭಿವೃದ್ಧಿ ಮೊದಲು” ಸ್ಫೂರ್ತಿಯಡಿ ಪ್ರಸ್ತುತ ಮಾದರಿ ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳನ್ನು ಪುನರುಜ್ಜೀವನಗೊಳಿಸಲಾಗುವುದು ಮತ್ತು ಹೆಚ್ಚು ಹೂಡಿಕೆ ಸ್ನೇಹಿಯನ್ನಾಗಿ ರೂಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com