
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ 2025-26ನೇ ಸಾಲಿನ ಬಜೆಟ್‌ನಲ್ಲಿ ಜನಗಣತಿ, ಸಮೀಕ್ಷೆ ಮತ್ತು ರಿಜಿಸ್ಟ್ರಾರ್ ಜನರಲ್ ಇಂಡಿಯಾಗೆ ಕೇವಲ ರೂ. 574.80 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ದಶಕದಿಂದ ಕಾಯುತ್ತಿರುವ ಜನಗಣತಿ ಈ ವರ್ಷವೂ ನಡೆಯುವುದು ಅನುಮಾನವಾಗಿದೆ.
2019 ರಲ್ಲಿ ಕೇಂದ್ರ ಸರ್ಕಾರವು 2021 ರ ರಾಷ್ಟ್ರೀಯ ಜನಗಣತಿಯನ್ನು ರೂ. 8,754.23 ಕೋಟಿ ವೆಚ್ಚದಲ್ಲಿ ನಡೆಸಲು ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಯನ್ನು ರೂ. 3,941.35 ಕೋಟಿ ವೆಚ್ಚದಲ್ಲಿ ನವೀಕರಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಆದರೆ ಕೋವಿಡ್ ಕಾರಣದಿಂದ 2021ರಲ್ಲಿ ಜನಗಣತಿ ನಡೆದಿರಲಿಲ್ಲ.
2021-22ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಜನಗಣತಿ ಮತ್ತು ಎನ್ ಪಿಆರ್ ಗೆ 3,768 ಕೋಟಿ ಹಂಚಿಕೆ ಮಾಡಲಾಗಿತ್ತು. ಅಲ್ಲದೆ ಕಳೆದ ವರ್ಷ ಮಂಡಿಸಿದ 2024-25ರಲ್ಲಿ 572 ಕೋಟಿ. ರೂ. ಮೀಸಲಿಡಲಾಗಿತ್ತು. ಆದರೆ ಈ ಬಾರಿಯ ಅನುದಾನ ಗಮನಿಸಿದರೆ ಈ ವರ್ಷವೂ ಜನಗಣತಿ ನಡೆಯುವುದು ಅನುಮಾನವಾಗಿದೆ.
ಜನಗಣತಿ ಮತ್ತು NPR ಸಿದ್ಧಪಡಿಸುವ ಸಂಪೂರ್ಣ ಪ್ರಕ್ರಿಯೆಗೆ ಸುಮಾರು 12,000 ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
Advertisement