ರಾಷ್ಟ್ರಪತಿ ಮುರ್ಮು ಬಗ್ಗೆ ಹೇಳಿಕೆ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲು
ಮುಜಫರ್ ಪುರ(ಬಿಹಾರ): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಿಹಾರದ ಮುಜಫರ್‌ಪುರ ಜಿಲ್ಲೆಯ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ದೇಶದ ಅತ್ಯುನ್ನತ ಸಾಂವಿಧಾನಿಕ ಅಧಿಕಾರವನ್ನು ಅಗೌರವಿಸಿದ ಆರೋಪದ ಮೇಲೆ ಸೋನಿಯಾ ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಮುಜಫರ್‌ಪುರ ಮೂಲದ ವಕೀಲ ಸುಧೀರ್ ಓಜಾ ದೂರು ದಾಖಲಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಹ ಆರೋಪಿಗಳೆಂದು ಓಜಾ ಹೆಸರಿಸಿದ್ದು, ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಸೋನಿಯಾ ಗಾಂಧಿ ಅವರು 'ರಾಷ್ಟ್ರಪತಿ ಪಾಪ ಬಡ ಮಹಿಳೆ' ಎಂಬ ಹೇಳಿಕೆ ನೀಡುವ ಮೂಲಕ ರಾಷ್ಟ್ರಪತಿ ಸ್ಥಾನವನ್ನು ಮತ್ತು ಮಹಿಳೆಯನ್ನು ಅವಮಾನಿಸಿದ್ದಾರೆ. ಇದು ದೇಶದ ಅತ್ಯುನ್ನತ ಸಾಂವಿಧಾನಿಕ ಅಧಿಕಾರಕ್ಕೆ ಅಗೌರವವಾಗಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇದರಲ್ಲಿ ಸಹ ಆರೋಪಿಗಳಾಗಿದ್ದಾರೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಮುಜಾಫರ್‌ಪುರದ ಸಿಜೆಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ನಂತರ ಓಜಾ ಸುದ್ದಿಗಾರರಿಗೆ ತಿಳಿಸಿದರು.
ಫೆಬ್ರವರಿ 10 ರಂದು ನ್ಯಾಯಾಲಯವು ವಿಚಾರಣೆ ನಡೆಸಲಿದೆ.
ಏನಿದು ಪ್ರಕರಣ
ಬಜೆಟ್ ಅಧಿವೇಶನಕ್ಕೂ ಮುನ್ನ ರಾಷ್ಟ್ರಪತಿಗಳು ಸಂಸತ್ತಿನಲ್ಲಿ ಜಂಟಿ ಭಾಷಣ ಮಾಡಿದ ನಂತರ, ಸದನದ ಹೊರಗೆ ವರದಿಗಾರರು ಸೋನಿಯಾ ಗಾಂಧಿಯವರನ್ನು ಅವರ ಭಾಷಣದ ಬಗ್ಗೆ ಕೇಳಿದರು. ರಾಷ್ಟ್ರಪತಿಗಳು ಕೊನೆಗೆ ತುಂಬಾ ದಣಿದಿದ್ದರು... ಅವರಿಗೆ ಮಾತನಾಡಲು ಕಷ್ಟವಾಗುತ್ತಿತ್ತು, ಅವರ ಭಾಷಣ ಸಪ್ಪೆಯಾಗಿತ್ತು ಎಂದು ಮಾಜಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಟೀಕಿಸಿದ್ದರು.
ರಾಹುಲ್ ಗಾಂಧಿ ಅವರು ಕೂಡ ರಾಷ್ಟ್ರಪತಿಗಳ ಭಾಷಣ ನೀರಸವಾಗಿತ್ತು ಎಂದು ಒಂದು ಕಡೆ ಹೇಳಿದ್ದರು. ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಅಲ್ಲಿ ಹಾಜರಿದ್ದರು.
ರಾಷ್ಟ್ರಪತಿ ಭವನವು ನಂತರ ಹೇಳಿಕೆಯನ್ನು ಬಿಡುಗಡೆ ಮಾಡಿ, ಸೋನಿಯಾ ಗಾಂಧಿಯವರ ಹೇಳಿಕೆ ಒಪ್ಪಲು ಸಾಧ್ಯವಿಲ್ಲ, ಅವರು ದಣಿದಿರಲಿಲ್ಲ ಎಂದಿದೆ.