ಅಯೋಧ್ಯೆ ಬಳಿ ಕಣ್ಣುಗುಡ್ಡೆ ಕಿತ್ತು ಯುವತಿಯ ಅತ್ಯಾಚಾರ-ಹತ್ಯೆ; ರಾಮ, ಸೀತೆ ಎಲ್ಲಿದ್ದೀರಾ? ಹೆಣ್ಣುಮಗಳ ರಕ್ಷಿಸಲಾಗದ ಹುದ್ದೆಯೇ ಬೇಡ- ಗಳಗಳನೆ ಅತ್ತ ಸಂಸದ!
ಫೈಜಾಬಾದ್: ಅಯೋಧ್ಯೆಯಲ್ಲಿ 22 ವರ್ಷದ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿದ್ದ ಯುವತಿಯೊಬ್ಬಳನ್ನು ಕಣ್ಣುಗುಡ್ಡೆ ಕಿತ್ತು, ಬಟ್ಟೆ ಹರಿದು ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿರುವ ಘಟನೆ ಅಯೋಧ್ಯೆಯ ಬಳಿ ವರದಿಯಾಗಿದೆ.
22 ವರ್ಷದ ಯುವತಿ ಗುರುವಾರ ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ವಿಪರ್ಯಾಸವೆಂದರೆ ದೂರು ಸ್ವೀಕರಿಸಿ ಸಹಕರಿಸಬೇಕಿದ್ದ ಪೊಲೀಸರು ಸಹ ನಿಮ್ಮ ಮಗಳನ್ನು ನೀವೇ ಹುಡುಕಿಕೊಳ್ಳಿ ಎಂದು ಹೇಳಿದ್ದಾರೆಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಕೊನೆಗೆ ಅಯೋಧ್ಯೆಯ ಕಾಲುವೆಯೊಂದರಲ್ಲಿ ಯುವತಿಯ ಮೃತದೇಹ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತದೇಹದ ಮೇಲೆ ಬಟ್ಟೆ ಇರಲಿಲ್ಲ. ಕಣ್ಣುಗುಡ್ಡೆ ಕಿತ್ತುಹಾಕಲಾಗಿದೆ. ದೇಹದ ಹಲವೆಡೆ ಗಂಭೀರ ಗಾಯಗಳಾಗಿವೆ. ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಲಾಗಿತ್ತು ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಕೊಲ್ಲಲಾಗಿದೆ ಎಂದು ಪೋಷಕರು ಶಂಕಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕುಟುಂಬವು ಶುಕ್ರವಾರ ದೂರು ದಾಖಲಿಸಿದ ನಂತರ ಪೊಲೀಸರು ನಾಪತ್ತೆ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿ ಅಶುತೋಷ್ ತಿವಾರಿ ತಿಳಿಸಿದ್ದಾರೆ.
ಶವವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಫಲಿತಾಂಶವು ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ. "ಮರಣೋತ್ತರ ಪರೀಕ್ಷೆಯ ಫಲಿತಾಂಶಗಳನ್ನು ನಾವು ಸ್ವೀಕರಿಸಿದ ನಂತರ, ನಾವು ಅದರಂತೆ ಮುಂದುವರಿಯುತ್ತೇವೆ" ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ
ಬಲಿಪಶುವಿನ ಸಂಬಂಧಿಕರು ನೀಡಿರುವ ಮಾಹಿತಿಯ ಪ್ರಕಾರ ಆಕೆ ಭಗವದ್ ಕಥಾ ಕಾರ್ಯಕ್ರಮಕ್ಕೆ ಹೋಗಿದ್ದರು, ಆದರೆ ಮನೆಗೆ ಹಿಂತಿರುಗಲಿಲ್ಲ ಎಂದು ಹೇಳಿದರು. "ನಾವು ಕಾಲುವೆಯಲ್ಲಿ ಆಕೆಯ ದೇಹವನ್ನು ಕಂಡೆವು. ಬಟ್ಟೆಯಿಲ್ಲದೆ ಮತ್ತು ಹಗ್ಗಗಳಿಂದ ಕಟ್ಟಲಾಗಿತ್ತು. ಆಕೆಯ ಮೂಳೆಗಳು ಮುರಿದಿದ್ದವು. ಆಕೆಯನ್ನು ನಿರ್ದಯವಾಗಿ ಕೊಲ್ಲಲಾಗಿದೆ" ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ.
ಸಂಸದ ಕಣ್ಣೀರು
ಪತ್ರಿಕಾಗೋಷ್ಠಿಯಲ್ಲಿ ಫೈಜಾಬಾದ್ ಸಂಸದ ಅವಧೇಶ್ ಪ್ರಸಾದ್ ಘಟನೆ ಬಗ್ಗೆ ತಮ್ಮ ದುಃಖವನ್ನು ಹೊರಹಾಕುತ್ತಾ ಕಣ್ಣೀರು ಹಾಕಿದ್ದಾರೆ. ಅಯೋಧ್ಯೆಯ ಬಳಿ ಕೊಲೆಯಾಗಿ ಪತ್ತೆಯಾದ 22 ವರ್ಷದ ದಲಿತ ಮಹಿಳೆಯ ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ ತಾವು ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅಯೋಧ್ಯೆ ಫೈಜಾಬಾದ್ ಸಂಸದೀಯ ಕ್ಷೇತ್ರದ ಭಾಗವಾಗಿದೆ.
"ನಾನು ದೆಹಲಿಗೆ ಹೋಗಿ ಈ ವಿಷಯವನ್ನು ಲೋಕಸಭೆಯಲ್ಲಿ (ಪ್ರಧಾನಿ ನರೇಂದ್ರ) ಮೋದಿ ಅವರ ಮುಂದೆ ಪ್ರಸ್ತಾಪಿಸುತ್ತೇನೆ. ನಮಗೆ ನ್ಯಾಯ ಸಿಗದಿದ್ದರೆ ನಾನು ಲೋಕಸಭೆಗೆ ರಾಜೀನಾಮೆ ನೀಡುತ್ತೇನೆ. ನಾವು ಹೆಣ್ಣುಮಕ್ಕಳನ್ನು ಉಳಿಸುವಲ್ಲಿ ವಿಫಲರಾಗಿದ್ದೇವೆ. ಇತಿಹಾಸವು ನಮ್ಮನ್ನು ಹೇಗೆ ನೋಡುತ್ತದೆ? ನಮ್ಮ ಮಗಳಿಗೆ ಇದು ಹೇಗೆ ಸಂಭವಿಸಿತು" ಎಂದು ಸಮಾಜವಾದಿ ಪಕ್ಷದ ಸಂಸದರು ಅಳುತ್ತಾ ಪ್ರಶ್ನಿಸಿದ್ದಾರೆ. "ಮರ್ಯಾದಾ ಪುರುಷೋತ್ತಮ ಶ್ರೀರಾಮ, ತಾಯಿ ಸೀತಾ, ನೀವು ಎಲ್ಲಿದ್ದೀರಿ?" ಎಂದು ಅಳುತ್ತಾ ಸಂಸದರು ಪ್ರಶ್ನಿಸಿದ್ದಾರೆ.