
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಕ್ಷಣಗಣೆನೆ ಆರಂಭವಾಗಿದ್ದು, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿ ಮುಖ್ಯಮಂತ್ರಿ ಅತಿಶಿ ಅವರೊಂದಿಗೆ ಮಂಗಳವಾರ ಚುನಾವಣಾ ಆಯೋಗ(ಇಸಿ)ಕ್ಕೆ ಭೇಟಿ ಮಾಡಿ, ಮತದಾನಕ್ಕೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಮತದಾರರಿಗೆ ಬೆದರಿಕೆ ತಂತ್ರಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಜ್ರಿವಾಲ್, ಮತದಾರರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲು ಬಿಜೆಪಿ ಮತ್ತು ದೆಹಲಿ ಪೊಲೀಸರು "ಗೂಂಡಾಗಿರಿ"ಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
"ಹಿಂಸೆ ಮತ್ತು ಬೆದರಿಕೆಗಾಗಿ ದೆಹಲಿ ಪೊಲೀಸರನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ನಾವು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ. ಅನೇಕ ಜನರು ಭಯಭೀತರಾಗಿದ್ದಾರೆ ಮತ್ತು ಭಯದಿಂದಾಗಿ ಅವರು ಮತದಾನಕ್ಕೆ ಬರದಿರಬಹುದು" ಎಂದು ದೆಹಲಿ ಮಾಜಿ ಸಿಎಂ ಹೇಳಿದರು.
ಮತದಾರರ ಮತದಾನವನ್ನು ವಿಶೇಷವಾಗಿ ಕೊಳೆಗೇರಿ ನಿವಾಸಿಗಳಲ್ಲಿ ನಿಗ್ರಹಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದಾರೆ.
"ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಅವರ ಬೆರಳುಗಳಿಗೆ ಕಪ್ಪು ಶಾಯಿಯಿಂದ ಗುರುತು ಹಾಕಲಾಗುತ್ತಿದೆ ಮತ್ತು ಮತದಾರರ ಮೇಲೆ ಪ್ರಭಾವ ಬೀರಲು ಹಣ ಹಾಗೂ ಬೆದರಿಕೆ ಹಾಕಲಾಗುತ್ತಿದೆ ಎಂಬ ವರದಿಗಳಿವೆ. ನಾವು ಈ ಕಳವಳಗಳನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ" ಎಂದು ಕೇಜ್ರಿವಾಲ್ ಹೇಳಿದರು.
ಭೇಟಿಗೆ ಅವಕಾಶ ನೀಡಿದ್ದಕ್ಕಾಗಿ ನಾನು ಚುನಾವಣಾ ಆಯೋಗಕ್ಕೆ ಧನ್ಯವಾದ ಅರ್ಪಿಸುತ್ತೇನೆ ಮತ್ತು ಅಧಿಕಾರಿಗಳು ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಡೆಸುವ ಭರವಸೆ ನೀಡಿದ್ದಾರೆ ಎಂದರು.
"ಮತದಾನದ ಹಕ್ಕನ್ನು ಕಸಿದುಕೊಳ್ಳುವಂತಹ ಯಾವುದೇ ತಪ್ಪುಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಚುನಾವಣಾ ಆಯೋಗ ನಮಗೆ ಭರವಸೆ ನೀಡಿದೆ" ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
Advertisement