
ಪ್ರಯಾಗ್ ರಾಜ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಪ್ರಯಾಗ್ ರಾಜ್ ದಲ್ಲಿ ನಡೆಯುತ್ತಿರುವ ಐತಿಹಾಸಿಕ ಶತಮಾನದ ಮಹಾಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಘ ಅಷ್ಟಮಿ ದಿನ ಪುಣ್ಯಸ್ನಾನ ಮಾಡಿದ್ದಾರೆ.
ಪ್ರಯಾಗ್ ರಾಜ್ ದ ಸಂಗಮ ಘಾಟ್ ನ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಪ್ರಧಾನಿ ಮೋದಿ ಪವಿತ್ರ ಗಂಗಾ ಜಲಕ್ಕೆ ಅರ್ಘ್ಯ ಬಿಟ್ಟು ಸುತ್ತು ಬಂದು ಕಣ್ಣುಮುಚ್ಚಿ ನೀರಿನ ಮಧ್ಯೆ ನಿಂತು ರುದ್ರಾಕ್ಷಿ ಮಾಲೆ ಹಿಡಿದುಕೊಂಡು ಧ್ಯಾನ ಮಾಡಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಾಥ್ ನೀಡಿದರು.
ನಂತರ ಗಂಗಾಮಾತೆಗೆ ಮತ್ತು ಸೂರ್ಯದೇವನಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ಅಮೃತ ಸ್ನಾನ
ಭಾರತದ ಸನಾತನ ಧರ್ಮದಲ್ಲಿ, ಮಹಾಕುಂಭದ ಸಮಯದಲ್ಲಿ ಅಮೃತ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮಹಾಕುಂಭದಲ್ಲಿ ಸ್ನಾನ ಮಾಡುವುದು ವ್ಯಕ್ತಿಯ ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಎಲ್ಲಾ ಪಾಪಗಳನ್ನು ತೊಡೆದುಹಾಕಿ ಮೋಕ್ಷವನ್ನು ಪಡೆಯುತ್ತದೆ ಎಂದರ್ಥವಾಗಿದೆ.
ಪೌಷ ಪೂರ್ಣಿಮೆಯಂದು (ಜನವರಿ 13) ಪ್ರಾರಂಭವಾದ 2025 ರ ಮಹಾ ಕುಂಭವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೇಳವಾಗಿದ್ದು, ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತದೆ. ಫೆಬ್ರವರಿ 26 ರಂದು ಮಹಾಶಿವರಾತ್ರಿಯವರೆಗೆ ಇದು ಮುಂದುವರಿಯುತ್ತದೆ.
12 ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭವು ಭಾರತ ಮತ್ತು ಪ್ರಪಂಚದಾದ್ಯಂತ ಇಲ್ಲಿಯವರೆಗೆ 38 ಕೋಟಿಗೂ ಹೆಚ್ಚು ಯಾತ್ರಿಕರನ್ನು ಆಕರ್ಷಿಸಿದೆ ಎಂದು ಮೆಗಾ ಮೇಳವನ್ನು ಆಯೋಜಿಸುತ್ತಿರುವ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
Advertisement