
ಪ್ರಯಾಗ್ ರಾಜ್: "ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿದ್ದು ಸಂತೋಷವಾಯಿತು. ಸಂಗಮದಲ್ಲಿನ ಸ್ನಾನವು ದೈವಿಕ ಸಂಪರ್ಕದ ಕ್ಷಣವಾಗಿದೆ, ಅದರಲ್ಲಿ ಭಾಗವಹಿಸಿದ ಕೋಟ್ಯಂತರ ಇತರರಂತೆ, ನಾನು ಕೂಡ ಭಕ್ತಿಯ ಮನೋಭಾವದಿಂದ ತುಂಬಿದ್ದೆ. ಗಂಗಾ ಮಾತೆ ಎಲ್ಲರಿಗೂ ಶಾಂತಿ, ಬುದ್ಧಿವಂತಿಕೆ, ಉತ್ತಮ ಆರೋಗ್ಯ ಮತ್ತು ಸಾಮರಸ್ಯವನ್ನು ದಯಪಾಲಿಸಲಿ'' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಯಾಗ್ ರಾಜ್ ಮಹಾಕುಂಭ ಮೇಳದ ನಂತರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಘ ಮಾಸದ ಅಷ್ಟಮಿ ದಿನವಾದ ಇಂದು ಬುಧವಾರ ಬೆಳಗ್ಗೆ ಮಹಾ ಕುಂಭ ಮೇಳ ನಡೆಯುತ್ತಿರುವ ಪ್ರಯಾಗರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ 'ಪವಿತ್ರ ಸ್ನಾನ' ಮಾಡಿದರು.
ಪ್ರಕಾಶಮಾನವಾದ ಕೇಸರಿ ಜಾಕೆಟ್ ಮತ್ತು ನೀಲಿ ಟ್ರ್ಯಾಕ್‌ಪ್ಯಾಂಟ್ ಧರಿಸಿ, 'ರುದ್ರಾಕ್ಷಿ' ಮಣಿಗಳನ್ನು ಹಿಡಿದು, ಮೋದಿಯವರು ನದಿ ನೀರಿನಲ್ಲಿ ಹಲವಾರು ಬಾರಿ ಮಿಂದೆದ್ದು ಸ್ನಾನ ಮಾಡುತ್ತಾ ಪ್ರಾರ್ಥನೆ ಪಠಿಸಿದರು.
ಇಂದು ಪ್ರಯಾಗರಾಜ್ ಮಹಾಕುಂಭದಲ್ಲಿ, ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ ನಂತರ, ನಮಗೆ ಪೂಜೆ ಮಾಡುವ ಪರಮ ಭಾಗ್ಯ ಸಿಕ್ಕಿತು. ಗಂಗಾ ಮಾತೆಯ ಆಶೀರ್ವಾದವನ್ನು ಪಡೆದ ಕಾರಣ, ಮನಸ್ಸಿಗೆ ಅಪಾರ ಶಾಂತಿ ಮತ್ತು ತೃಪ್ತಿ ಸಿಕ್ಕಿದೆ. ಎಲ್ಲಾ ದೇಶವಾಸಿಗಳ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿಕೊಂಡೆನು ಎಂದು ಬರೆದಿದ್ದಾರೆ.
ಇಂದು ಮುಂಜಾನೆ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಸಂಗಮಕ್ಕೆ ದೋಣಿ ಮೂಲಕ ಬಂದರು. ಪ್ರಯಾಗ್ ರಾಜ್ ಮಹಾಕುಂಭ ಮೇಳದಲ್ಲಿ ಪ್ರಪಂಚದಾದ್ಯಂತದ ಲಕ್ಷಾಂತರ ಹಿಂದೂ ಭಕ್ತರು ಸೇರಿದ್ದಾರೆ. ವಾರದ ಹಿಮದೆ ಮೌನಿ ಅಮಾವಾಸ್ಯೆ ದಿನ ಕಾಲ್ತುಳಿತ ಉಂಟಾಗಿ ಇಲ್ಲಿ 30 ಜನರನ್ನು ಬಲಿ ತೆಗೆದುಕೊಂಡಿತ್ತು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಮೋದಿಯವರು ಮಹಾಕುಂಭಕ್ಕೆ ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ, ತಮ್ಮ 'ಪವಿತ್ರ ಸ್ನಾನ'ಕ್ಕೆ ಹೊರಡುವ ಮೊದಲು, ಪ್ರಧಾನಿಯವರು ಎಕ್ಸ್ ಖಾತೆಯಲ್ಲಿ, ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸುವಂತೆ ಪ್ರೋತ್ಸಾಹಿಸುವ ಪೋಸ್ಟ್ ಮಾಡಿದ್ದಾರೆ. ದೆಹಲಿ ಮತದಾರರು ಪೂರ್ಣ ಉತ್ಸಾಹದಿಂದ ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಲು ಮತ್ತು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಲು ನಾನು ಒತ್ತಾಯಿಸುತ್ತೇನೆ ಎಂದು ಬರೆದಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ 5,500 ಕೋಟಿ ರೂ. ಮೌಲ್ಯದ 167 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ವಾರಗಳ ನಂತರ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ.. ಧಾರ್ಮಿಕ ಕಾರ್ಯಕ್ರಮಕ್ಕೂ ಮುನ್ನ ರಸ್ತೆಗಳು, ನೈರ್ಮಲ್ಯ, ಭದ್ರತೆ ಮತ್ತು ಡಿಜಿಟಲ್ ಸೇವೆಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳೊಂದಿಗೆ ಮಹಾ ಕುಂಭವು ಇದೇ ರೀತಿಯ ಗಮನ ಸೆಳೆಯಿತು.
ಭೂತಾನಿನ ರಾಜ ಜಿಗ್ಮೆ ಖೇಸರ್ ನಮಗ್ಯಾಲ್ ವಾಂಗ್ಚುಕ್ ಕೂಡ ಕುಂಭಕ್ಕಾಗಿ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದರು. ಮುಖ್ಯಮಂತ್ರಿಯೊಂದಿಗೆ ಅವರು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು.
Advertisement