ಕಾಂಗ್ರೆಸ್ ನಿಂದ 'ಸಬ್ ಕಾ ವಿಕಾಸ್' ಸಾಧ್ಯವಿಲ್ಲ, ಅವರಿಗೆ 'ಕುಟುಂಬವೇ ಮೊದಲು': ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ

ಕಾಂಗ್ರೆಸ್ ತನ್ನ ನೀತಿಗಳಲ್ಲಿ "ಕುಟುಂಬವೇ ಮೊದಲು" ಎಂಬುದಕ್ಕೆ ಆದ್ಯತೆ ನೀಡುತ್ತಿದೆ ಎಂದು ಪ್ರಧಾನಿ ಟೀಕಿಸಿದರು.
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ
Updated on

ನವದೆಹಲಿ: 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ತತ್ವವು ಎಲ್ಲರ ಜವಾಬ್ದಾರಿಯಾಗಿದ್ದರೂ, ಕಾಂಗ್ರೆಸ್ ಪಕ್ಷದಿಂದ ಅದನ್ನು ನಿರೀಕ್ಷಿಸುವುದು ತಪ್ಪು ಎಂದು ಗುರುವಾರ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ವಾಗ್ದಾಳಿ ನಡೆಸಿದರು.

ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ತನ್ನ ನೀತಿಗಳಲ್ಲಿ "ಕುಟುಂಬವೇ ಮೊದಲು" ಎಂಬುದಕ್ಕೆ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದರು.

ಬಿಜೆಪಿಯ ಗಮನ "ರಾಷ್ಟ್ರ ಮೊದಲು" ಎಂದು ಹೇಳಿದ ಪ್ರಧಾನಿ ಮೋದಿ, ಭಾರತದ ಜನರು ಬಿಜೆಪಿಯ ಅಭಿವೃದ್ಧಿ ಮಾದರಿಗೆ ಬಲವಾದ ಬೆಂಬಲವನ್ನು ನೀಡಿದ್ದಾರೆ. ಆದರೆ ಕಾಂಗ್ರೆಸ್ "ಸುಳ್ಳು, ವಂಚನೆ, ಭ್ರಷ್ಟಾಚಾರ, ಸ್ವಜನಪಕ್ಷಪಾತದ ಮಿಶ್ರಣವಿರುವ ರಾಜಕೀಯದ ಮಾದರಿಯನ್ನು ಸೃಷ್ಟಿಸಿದೆ. ಕಾಂಗ್ರೆಸ್​ಗೆ ಕುಟುಂಬ ರಾಜಕಾರಣವೇ ಮುಖ್ಯ. ಅಂಥವರಿಂದ ಸಬ್ಕಾ ವಿಕಾಸ್ ಸಾಧ್ಯವಿಲ್ಲ ಎಂದು ಮೋದಿ ಲೇವಡಿ ಮಾಡಿದರು.

ನಮ್ಮ ಸರ್ಕಾರದ ಗಮನ 'ತುಷ್ಟಿಕರಣ'ಕ್ಕಿಂತ 'ಸಂತುಷ್ಟಿಕರಣ'(ತೃಪ್ತಿ)ದ ಮೇಲೆ ಇದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ
'ಗುಡಿಸಲಲ್ಲಿ ಫೋಟೋ ಸೆಷನ್‌ ಮಾಡಿಕೊಳ್ಳುವವರಿಗೆ ಬಡತನದ ಬಗ್ಗೆ ಚರ್ಚೆ "ನೀರಸ" ': ರಾಹುಲ್ ವಿರುದ್ಧ ಮೋದಿ ವಾಗ್ದಾಳಿ

ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಗೆ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, "ಕಾಂಗ್ರೆಸ್ ಸರ್ಕಾರ ಬಿ ಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ. ಆದರೆ ಇಂದು ಅವರು 'ಜೈ ಭೀಮ್' ಎಂದು ಹೇಳುವಂತೆ ಮಾಡಿದ್ದೇವೆ" ಎಂದು ಹೇಳಿದರು.

1990 ರಲ್ಲಿ ಜನತಾದಳದ ವಿ ಪಿ ಸಿಂಗ್ ಪ್ರಧಾನಿಯಾಗಿದ್ದಾಗ ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಯಿತು.

"ಕಾಂಗ್ರೆಸ್‌ಗೆ ಬಿ ಆರ್ ಅಂಬೇಡ್ಕರ್ ಬಗ್ಗೆ ದ್ವೇಷ, ಕೋಪವಿತ್ತು, ಲೋಕಸಭಾ ಚುನಾವಣೆಯಲ್ಲಿ ಅವರನ್ನು ಎರಡು ಬಾರಿ ಸೋಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿತು" ಎಂದು ಪ್ರಧಾನಿ ಮೋದಿ ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com