
ಶಿವಪುರಿ: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬಹ್ರೆತಾ ಸಾನಿ ಗ್ರಾಮದ ಬಳಿ ಗುರುವಾರ ಭಾರತೀಯ ವಾಯುಪಡೆ(ಐಎಎಫ್)ಯ ಮಿರಾಜ್ 2000 ತರಬೇತಿ ನಿರತ ಯುದ್ಧ ವಿಮಾನ ಪತನಗೊಂಡಿದೆ.
ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿ ಹೊರ ಜಿಗಿದಿದ್ದು, ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ಅಪಘಾತದ ನಂತರ, ಸ್ಥಳೀಯ ಅಧಿಕಾರಿಗಳು, ರಕ್ಷಣಾ ತಂಡವನ್ನು ತ್ವರಿತವಾಗಿ ಸ್ಥಳಕ್ಕೆ ಕಳುಹಿಸಿದರು. ಯುದ್ಧ ವಿಮಾನ ಪತನಕ್ಕೆ ಕಾರಣ ಇನ್ನೂ ತಿಳಿದಿಲ್ಲ.
ಘಟನಾ ಸ್ಥಳದಲ್ಲಿ ಬೆಂಕಿ ಮತ್ತು ಹೊಗೆ ಕಂಡು ಬಂದ ಹಿನ್ನಲೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಹೊಲದಲ್ಲಿ ವಿಮಾನದ ಅವಶೇಷಗಳು ಬಿದ್ದಿದ್ದು, ನೂರಾರು ಜನ ಅವಶೇಷಗಳ ಸುತ್ತಲೂ ಜಮಾಯಿಸಿದ್ದಾರೆ.
ಇನ್ನು ರಕ್ಷಣಾ ಸಚಿವಾಲಯ ಘಟನೆ ಬಗ್ಗೆ ತನಿಖೆ ನಡೆಸಲು ಸೂಚಿಸಿದೆ ಎಂದು ತಿಳಿದು ಬಂದಿದೆ.
Advertisement