
ನವದೆಹಲಿ: ದೆಹಲಿಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಮತಗಟ್ಟೆಯ ಮತದಾರರ ಅಂಕಿಅಂಶಗಳನ್ನು ಒದಗಿಸುವ ಫಾರ್ಮ್ 17 ಸಿ ಅಪ್ ಲೋಡ್ ಮಾಡಲು ಭಾರತೀಯ ಚುನಾವಣಾ ಆಯೋಗ ನಿರಾಕರಿಸಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಕೇಜ್ರಿವಾಲ್, ಅನೇಕ ಬಾರಿ ಮನವಿ ಮಾಡಿದ್ದರೂ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಮತಗಟ್ಟೆಯ ಮತಗಳ ಸಂಖ್ಯೆ ಹಾಗೂ ಫಾರ್ಮ್ 17 ಸಿ ಅಪ್ ಲೋಡ್ ಮಾಡಲು ಚುನಾವಣಾ ಆಯೋಗ ನಿರಾಕರಿಸಿದೆ ಎಂದು ತಿಳಿಸಿದ್ದಾರೆ.
ಪಕ್ಷವು transparentelections.in ಎಂಬ ವೆಬ್‌ಸೈಟ್ ಪ್ರಾರಂಭಿಸಿದೆ. ಅಲ್ಲಿ ಅದರಲ್ಲಿ ಪ್ರತಿಯೊಂದು ಕ್ಷೇತ್ರದ ಎಲ್ಲಾ ಫಾರ್ಮ್ 17 ಸಿ ಅಪ್ ಲೋಡ್ ಮಾಡಿದ್ದೇವೆ. ಈ ಫಾರ್ಮ್ ಪ್ರತಿ ಬೂತ್‌ನಲ್ಲಿ ಚಲಾವಣೆಯಾದ ಮತಗಳ ಎಲ್ಲಾ ವಿವರಗಳನ್ನು ಹೊಂದಿದೆ" ಎಂದು ಕೇಜ್ರಿವಾಲ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಫೆಬ್ರವರಿ 5 ರ ಚುನಾವಣೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸ್ಥಾಪಿಸಲಾದ ಪ್ರತಿ ವಿಧಾನಸಭಾ ಕ್ಷೇತ್ರ ಮತ್ತು ಪ್ರತಿ ಮತಗಟ್ಟೆಯ ಮಾಹಿತಿಯನ್ನು ನೀಡುತ್ತೇವೆ. ಇದರಿಂದ ಪ್ರತಿಯೊಬ್ಬ ಮತದಾರರಿಗೂ ಮಾಹಿತಿ ದೊರೆಯುತ್ತದೆ. ಇದು ಚುನಾವಣಾ ಆಯೋಗವು ಪಾರದರ್ಶಕತೆಯ ಹಿತಾಸಕ್ತಿಯಿಂದ ಮಾಡಬೇಕಾದ ಕೆಲಸವಾಗಿದೆ. ಆದರೆ ಅದನ್ನು ಮಾಡಲು ಅವರು ನಿರಾಕರಿಸುತ್ತಿರುವುದು ದುರದೃಷ್ಟಕರವಾಗಿದೆ ಎಂದಿದ್ದಾರೆ.
ಇದಕ್ಕೂ ಮುನ್ನಾ ಬಿಜೆಪಿ, ತಮ್ಮ ಪಕ್ಷದ 16 ಅಭ್ಯರ್ಥಿಗಳನ್ನು ಖರೀಸಿಲು ಪ್ರಯತ್ನಿಸುತ್ತಿದೆ. ಎಎಪಿ ಅಭ್ಯರ್ಥಿಗಳು, ಬಿಜೆಪಿ ಸೇರಿದರೆ ಸಚಿವ ಸ್ಥಾನ ಮತ್ತು ತಲಾ 15 ಕೋಟಿ ರೂ.ಗಳ ನೀಡುವ ಆಫರ್ ನೀಡಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದರು.
Advertisement