
ಚಂಡೀಗಢ: 104 ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕ ಗಡಿಪಾರು ಮಾಡಿದ ಎರಡು ದಿನಗಳ ನಂತರ ಪಂಜಾಬ್ ಪೊಲೀಸರು ವಂಚನೆ ಆರೋಪದ ಮೇಲೆ 'ನಕಲಿ' ಟ್ರಾವೆಲ್ ಏಜೆಂಟ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದಾಗ್ಯೂ, ಗಡಿಪಾರಾದ ಇತರರು ತಮ್ಮ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ (BNS) ಮತ್ತು ಪಂಜಾಬ್ ಪ್ರಯಾಣ ವೃತ್ತಿಪರರ (ನಿಯಂತ್ರಣ) ಕಾಯ್ದೆ 2014 ರ ಸೆಕ್ಷನ್ 318 (4) ಮತ್ತು 13 ರ ಅಡಿಯಲ್ಲಿ ಫೆಬ್ರವರಿ 6 ರಂದು ಅಮೃತಸರ ಗ್ರಾಮಾಂತರ ಪೊಲೀಸ್ ಜಿಲ್ಲೆಯ ರಾಜಸಾನ್ಸಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಮೃತಸರದ ರಾಜಸಾನ್ಸಿಯ ಸೇಲಂಪುರ ಗ್ರಾಮದ ದಲೇರ್ ಸಿಂಗ್ ಅವರ ದೂರಿನ ಮೇರೆಗೆ ಕೋಟ್ಲಿ ಖೇಹ್ರಾ ಗ್ರಾಮದ ಸತ್ನಾಮ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಡಿಪಾರಾದ 104 ಭಾರತೀಯ ವಲಸಿಗರಲ್ಲಿ ದಲೇರ್ ಕೂಡ ಸೇರಿದ್ದಾರೆ. ಮಾನ್ಯಗೊಂಡ ವೀಸಾದ ಮೇಲೆ ಯುಎಸ್‌ಗೆ ಕಳುಹಿಸುವುದಾಗಿ ಸತ್ಮಾಮ್ ಭರವಸೆ ನೀಡಿದ್ದರು. ಆದರೆ ಬದಲಿಗೆ ಅಕ್ರಮವಾಗಿ ಕಳುಹಿಸಿದ್ದಾರೆ.ಪನಾಮ ಕಾಡಿನಲ್ಲಿ ಮಾರ್ಗ ಹುಡುಕುವುದು ಸೇರಿದಂತೆ ಅನೇಕ ಕಷ್ಟಗಳನ್ನು ಎದುರಿಸಿರುವುದಾಗಿ ದಲೇರ್ ಸಿಂಗ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
"2023 ರಲ್ಲಿ, ಪಿಂಡಿ ಸೇಡಾ ಗ್ರಾಮದ ನನ್ನ ಸಂಬಂಧಿ ಗುರುಸೇವಕ್ ಸಿಂಗ್ ನನ್ನನ್ನು ಟ್ರಾವೆಲ್ ಏಜೆಂಟ್ ಸತ್ನಾಮ್ ಸಿಂಗ್ ಅವರಿಗೆ ಪರಿಚಯಿಸಿದರು. ನನ್ನನ್ನು US ಗೆ ಕಳುಹಿಸಲು ರೂ. 60 ಲಕ್ಷ ಒಪ್ಪಂದವಾಗಿತ್ತು. ಸತ್ನಾಮ್ ಸಿಂಗ್ ಖಾತೆಗೆ 5 ಲಕ್ಷ ರೂ. ಜಮಾ ಮಾಡಿ ನನ್ನ ಪಾಸ್‌ಪೋರ್ಟ್ ನೀಡಿದ್ದೇನೆ. ಅವರು ನೈಜೀರಿಯಾಕ್ಕೆ ವೀಸಾ ವ್ಯವಸ್ಥೆ ಮಾಡಿದ್ದರು. ಆದರೆ ಮುಂದಿನ ವೀಸಾ ದೊರೆಯದೆ ಹಿಂದಿರುಗಿದ್ದೆ ಎಂದು ದಲೇರ್ ಸಿಂಗ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಕಳೆದ ವರ್ಷ ಆಗಸ್ಟ್ 15ರಂದು ನನ್ನನ್ನು ದುಬೈಗೆ ಕಳುಹಿಸಿದ್ದರು, ಅಲ್ಲಿ ಸುಮಾರು ಆರರಿಂದ ಏಳು ದಿನ ಇದ್ದು ಅಲ್ಲಿಂದ ಬ್ರೆಜಿಲ್‌ಗೆ ಹೋಗಿದ್ದೆ. ಆಗಸ್ಟ್ 26 ರಂದು, ಪತ್ನಿ ಚರಂಜಿತ್ ಕೌರ್ ಮತ್ತು ಸೋದರ ಮಾವ ಗುರುಸೇವಕ್ ಸಿಂಗ್ ಅವರು ಸತ್ನಾಮ್ ಸಿಂಗ್ ಅವರ ಮನೆಗೆ ಹೋಗಿ 15 ಲಕ್ಷ ರೂ.ನಗದು ನೀಡಿದ್ದರು. ಕೆಲವು ದಿನಗಳ ಬಳಿಕ ಅವರ ಪತ್ನಿ ಸಿಂಗ್ ಖಾತೆಗೆ ಇನ್ನೂ 4 ಲಕ್ಷ ರೂ. Google Pay ಮೂಲಕ ಸಿಂಗ್‌ಗೆ ರೂ. 2 ಲಕ್ಷ ಪಾವತಿಸಲಾಗಿತ್ತು. ನಂತರ ಕೆಲವು ದೇಶಗಳಲ್ಲಿ ಪ್ರಯಾಣಿಸಿದ ನಂತರ ಮೆಕ್ಸಿಕೋ ತಲುಪಿದೆ. ನನ್ನ ಹೆಂಡತಿ ಮತ್ತು ಸೋದರಮಾವ ಸಿಂಗ್ ಅವರಿಗೆ ರೂ. 34 ಲಕ್ಷ ರೂ. ಪಾವತಿಸಿದ್ದು, ಜನವರಿ 15 ರಂದು ಮೆಕ್ಸಿಕೋ ಗಡಿಯ ಮೂಲಕ ಯುಎಸ್ ತಲುಪಿದ್ದಾಗಿ ದಲೇರ್ ಸಿಂಗ್ ತಿಳಿಸಿದ್ದಾರೆ.
ಕಾನೂನುಬದ್ಧವಾಗಿ ಅಮೆರಿಕಕ್ಕೆ ಕಳುಹಿಸಲು ಸಿಂಗ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೆ. ಆದರೆ ಅವರು ಕಳ್ಳಮಾರ್ಗದ ಮೂಲಕ ಕಳುಹಿಸಿ ರೂ. 60 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. 104 ಗಡಿಪಾರು ಮಾಡಿದವರಲ್ಲಿ 30 ಮಂದಿ ಪಂಜಾಬ್ ನವರಾಗಿದ್ದಾರೆ. ಆದರೆ ಹೆಚ್ಚಿನವರು ಪೊಲೀಸರೊಂದಿಗೆ ಸಹಕರಿಸುತ್ತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
Advertisement