
ದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸತತ 3ನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುವಲ್ಲಿ ವಿಫಲವಾಗಿ ವಿಪಕ್ಷಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
20 ವರ್ಷಗಳಿಂದ ಅಧಿಕಾರದ ಅಜ್ಞಾತವಾಸ ಅನುಭವಿಸಿದ್ದ ಬಿಜೆಪಿ ಈಗ 40ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ದೆಹಲಿಯಲ್ಲಿ ಅಧಿಕಾರಕ್ಕೇರಲು ಸಜ್ಜಾಗಿದೆ.
ಒಂದು ಕಾಲದಲ್ಲಿ ಕೇಜ್ರಿವಾಲ್ ಗೆ ಮಾರ್ಗದರ್ಶಕರಾಗಿದ್ದ ಅಣ್ಣ ಹಜಾರೆ (Anna Hajare) ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
"ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ಉತ್ತಮವಾದ ಚಾರಿತ್ರ್ಯ ಇರಬೇಕು, ಉತ್ತಮ ಚಿಂತನೆಗಳು, ಐಡಿಯಾಗಳಿರಬೇಕು ಎಂದು ನಾನು ಈ ಹಿಂದಿನಿಂದ ಹೇಳುತ್ತಾ ಬಂದಿದ್ದೇನೆ. ಆದರೆ ಅದನ್ನು ಆಮ್ ಆದ್ಮಿ ಪಕ್ಷ ಅರ್ಥ ಮಾಡಿಕೊಳ್ಳಲಿಲ್ಲ.
ಕೇಜ್ರಿವಾಲ್ ಮದ್ಯ ಮತ್ತು ಹಣದಲ್ಲಿ ಸಿಲುಕಿಕೊಂಡರು, ಇದೇ ಕಾರಣದಿಂದಾಗಿ ಅವರ ಚಾರಿತ್ರ್ಯಕ್ಕೆ ಕಳಂಕ ಉಂಟಾಯಿತು. ಪರಿಣಾಮ ಆಮ್ ಆದ್ಮಿ ಪಕ್ಷ ಈಗ ಅಧಿಕಾರ ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಒಳ್ಳೆಯ ಚಾರಿತ್ರ್ಯದ ಬಗ್ಗೆ ಮಾತನಾಡುತ್ತಿದ್ದರು ಆದರೆ ಸ್ವತಃ ಅವರೇ ಮದ್ಯದ ಲಾಬಿಯಲ್ಲಿ ಅವರೇ ಸಿಲುಕಿದ್ದನ್ನು ಜನತೆ ನೋಡಿದ್ದರು. ರಾಜಕೀಯದಲ್ಲಿ ಆರೋಪಗಳು ಸಹಜ ಆದರೆ ಆರೋಪ ಎದುರಿಸುವವರು ತಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸಬೇಕು, ಸತ್ಯ ಎಂದಿಗೂ ಸತ್ಯವಾಗಿರುತ್ತದೆ. ಹಿಂದೊಮೆ ಪಕ್ಷ ರಚನೆಯ ಸಭೆ ನಡೆದಾಗ ನಾನು ಆ ಪಕ್ಷದ ಭಾಗವಾಗುವುದಿಲ್ಲ ಎಂದು ನಿರ್ಧರಿಸಿದ್ದೆ. ಅಂದಿನಿಂದ ಇಂದಿನವರೆಗೂ ನಾನು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದೇನೆ ಎಂದು ಅಣ್ಣ ಹಜಾರೆ ಹೇಳಿದ್ದಾರೆ.
Advertisement