
ರಾಯ್ ಪುರ: ಮಹಿಳೆಯೊಬ್ಬರು ಕಾರು ಚಾಲಕನ ತೊಡೆ ಮೇಲೆ ಕುಳಿತ ಪರಿಣಾಮ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಮೂವರಿಗೆ ಗಂಭೀರ ಗಾಯಗಳಾಗಿವೆ.
ಘಟನೆ ರಾಯ್ ಪುರದಲ್ಲಿ ನಡೆದಿದ್ದು, ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪ್ರತ್ಯಕ್ಷ ದರ್ಶಿಗಳ ಪ್ರಕಾರ ಕಾರಿನಲ್ಲಿ ಓರ್ವ ರಷ್ಯಾದ ಮಹಿಳೆ ಹಾಗೂ ಲಾಯರ್ ಇದ್ದರು ಇಬ್ಬರೂ ಮದಿರೆಯ ಮತ್ತಿನಲ್ಲಿದ್ದರು ಎಂದು ತಿಳಿದುಬಂದಿದೆ.
ಕಾರು ಅಪಘಾತಕ್ಕೂ ಮುನ್ನ ರಷ್ಯಾ ಮಹಿಳೆ ಕಾರು ಚಾಲಕನ ತೊಡೆಯ ಮೇಲೆ ಕುಳಿತಿದ್ದರು. ಪರಿಣಾಮ ರಸ್ತೆ ಸರಿಯಾಗಿ ಕಾಣದೇ ಈ ಅಪಘಾತ ಸಂಭವಿಸಿದೆ. ಕಾರು ಅಪಘಾತದ ಗಾಯಾಳುಗಳನ್ನು ಮೇಕಹರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತವಾದ ನಂತರ ತನ್ನ ತಪ್ಪನ್ನು ಅರಿತುಕೊಳ್ಳುವ ಬದಲು ಮಹಿಳೆ ನಡು ರಸ್ತೆಯಲ್ಲಿ ಮತ್ತಷ್ಟು ರಾದ್ಧಾಂತ ನಡೆಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರ ವಿರುದ್ಧ ಕೂಗಾಡಿರುವ ಮಹಿಳೆ ನಡು ರಸ್ತೆಯಲ್ಲಿ ರಾದ್ಧಾಂತ ಮಾಡಿರುವ ವಿಡಿಯೋ ವೈರಲ್ ಆಗತೊಡಗಿದೆ. ತನ್ನ ಫೋನ್ ಕಾಣೆಯಾಗಿದೆ ಎಂದು ಕಿರುಚುತ್ತಿದ್ದು ಪೊಲೀಸ್ ಠಾಣೆಗೆ ಕರೆದೊಯ್ಯಲು ಪೊಲೀಸರು ಪ್ರಯತ್ನಿಸಿದಾಗ ಆ ಮಹಿಳೆ ವಿರೋಧಿಸುತ್ತಿರುವುದು ಕಂಡುಬಂದಿದೆ. "ದಯವಿಟ್ಟು ಸಹಕರಿಸಿ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಗೆ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ಮಹಿಳೆ ಈ ಸಲಹೆಗೆ ಕಿವಿಗೊಡದೇ ಅವರ ವಿರುದ್ಧವೇ ಕೂಗಾಡುತ್ತಿದ್ದರು.
ರಷ್ಯಾದ ಮಹಿಳೆ ಪ್ರವಾಸಿ ವೀಸಾದಲ್ಲಿ ಭಾರತದಲ್ಲಿದ್ದರು. ಆಕೆ ಮತ್ತು ಆಕೆಯ ಸಹ ಚಾಲಕ ವಕೀಲರನ್ನು ಅಂತಿಮವಾಗಿ ಪೊಲೀಸರು ವಶಕ್ಕೆ ಪಡೆದರು. ತೆಲಿಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನ ಮೇಲೆ "ಭಾರತ ಸರ್ಕಾರ" ಎಂಬ ಸ್ಟಿಕ್ಕರ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಮಾಲೀಕರು ಮತ್ತು ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವುದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಕೋರಿದ್ದಾರೆ.
Advertisement