
ನವದೆಹಲಿ: ಜನಪ್ರಿಯ ಸಾಮಾಜಿಕ ಮಾಧ್ಯಮ ವ್ಯಕ್ತಿ ರಣವೀರ್ ಅಲ್ಲಾಬಾಡಿಯಾ ಸೋಮವಾರ ಒಂದು ಕಾರ್ಯಕ್ರಮದಲ್ಲಿ ಮಾಡಿದ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ, ಹಾಸ್ಯ ತನ್ನ ಸಾಮರ್ಥ್ಯವಲ್ಲ ಎಂದು ರಣವೀರ್ ಹೇಳಿದ್ದಾರೆ ಮತ್ತು ಇಡೀ ಸಂಚಿಕೆಯನ್ನು "ಅಜಾಗರೂಕತೆಯಿಂದಾಗಿದ್ದು" ಎಂದು ಬಣ್ಣಿಸಿದ್ದಾರೆ.
"ನನ್ನ ಕಾಮೆಂಟ್ ಕೇವಲ ಅನುಚಿತವಾಗಿದ್ದಷ್ಟೇ ಅಲ್ಲದೇ, ಅದು ತಮಾಷೆ ಎಂದೂ ಅನ್ನಿಸಲಿಲ್ಲ. ಹಾಸ್ಯ ನನ್ನ ಸಾಮರ್ಥ್ಯವಲ್ಲ. ಕ್ಷಮಿಸಿ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ" ಎಂದು ಬೀರ್‌ಬೈಸೆಪ್ಸ್ ಖ್ಯಾತಿಯ ಅಲ್ಲಾಬಾಡಿಯಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮಯ್ ರೈನಾ ಅವರ "ಇಂಡಿಯಾಸ್ ಗಾಟ್ ಲೇಟೆಂಟ್" ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆಯ ಬಗ್ಗೆ ಅಸಹ್ಯಕರವಾಗಿ ಕಾಮೆಂಟ್ ಮಾಡಿದ್ದಕ್ಕಾಗಿ ಅಲ್ಲಾಬಾದಿಯಾ ಟ್ರೋಲ್, ಟೀಕೆಗಳಿಗೆ ಒಳಗಾಗುತ್ತಿದ್ದಾರೆ.
"ತಮ್ಮ ವೇದಿಕೆಯನ್ನು ಹೀಗೆ ಬಳಸಲು ಬಯಸುತ್ತೀರಾ? ಎಂದು ನಿಮ್ಮಲ್ಲಿ ಹಲವರು ನನ್ನನ್ನು ಪ್ರಶ್ನಿಸಿದ್ದೀರಿ. ನಾನು ನನ್ನ ವೇದಿಕೆಯನ್ನು ಹೀಗೆ (ಸಭ್ಯತೆಯ ಗಡಿ ಮೀರಿದ ತಮಾಷೆಗಳಿಗೆ) ಬಳಸಲು ಬಯಸುವುದಿಲ್ಲ. ಏನಾಯಿತು ಎಂಬುದಕ್ಕೆ ನಾನು ಯಾವುದೇ ಸಂದರ್ಭ, ಸಮರ್ಥನೆ ಅಥವಾ ತಾರ್ಕಿಕತೆಯನ್ನು ನೀಡುವುದಿಲ್ಲ. ನಾನು ಕ್ಷಮೆಯಾಚಿಸಲು ನಿಮ್ಮೆದುರು ಬಂದಿದ್ದೇನೆ. ನಾನು ವೈಯಕ್ತಿಕವಾಗಿ, ಅಜಾಗರೂಕತೆ ಹೊಂದಿದ್ದೇನೆ. ಆ ರೀತಿಯ ತಮಾಷೆ ನನ್ನ ಕಡೆಯಿಂದ ಸೂಕ್ತವಾಗಿರಲಿಲ್ಲ" ಎಂದು ರಣವೀರ್ ಹೇಳಿದ್ದಾರೆ.
ನನ್ನ ಪಾಡ್‌ಕ್ಯಾಸ್ಟ್ ನ್ನು ಎಲ್ಲಾ ವಯಸ್ಸಿನ ಜನರು ವೀಕ್ಷಿಸುತ್ತಾರೆ ಮತ್ತು ಆ ಜವಾಬ್ದಾರಿಯನ್ನು ಹಗುರವಾಗಿ ತೆಗೆದುಕೊಳ್ಳುವ ರೀತಿಯ ವ್ಯಕ್ತಿಯಾಗಲು ನಾನು ಬಯಸುವುದಿಲ್ಲ ಎಂದು ಸಾಮಾಜಿಕ ಜಾಲತಾಣದ ಪ್ರಭಾವಿ ಹೇಳಿದ್ದಾರೆ.
"ನಾನು ಎಂದಿಗೂ ಕುಟುಂಬ ಎಂಬ ವಿಷಯದ ಬಗ್ಗೆ ಅಗೌರವ ತೋರುವುದಿಲ್ಲ. ಈ ವೇದಿಕೆಯನ್ನು ಉತ್ತಮವಾಗಿ ಬಳಸಬೇಕಾಗಿದೆ ಮತ್ತು ಈ ಇಡೀ ಅನುಭವದಿಂದ ನಾನು ಇದನ್ನೇ ಕಲಿತಿದ್ದೇನೆ. ನಾನು ಉತ್ತಮಗೊಳ್ಳುವ ಭರವಸೆ ನೀಡುತ್ತೇನೆ. ವೀಡಿಯೊದ ತಯಾರಕರನ್ನು ವೀಡಿಯೊದಿಂದ ಸಭ್ಯತೆಯ ಗೆರೆ ದಾಟಿದ ಭಾಗಗಳನ್ನು ತೆಗೆದುಹಾಕಲು ಕೇಳಿಕೊಂಡಿದ್ದೇನೆ ಮತ್ತು ಕೊನೆಯಲ್ಲಿ ನಾನು ಕ್ಷಮಿಸಿ ಎಂದು ಹೇಳಬಲ್ಲೆ. ಒಬ್ಬ ಮನುಷ್ಯನಾಗಿ ನೀವು ನನ್ನನ್ನು ಕ್ಷಮಿಸುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ರಣವೀರ್ ಹೇಳಿದ್ದಾರೆ.
Advertisement