
ನವದೆಹಲಿ: ರೋಸ್ಟ್ ಶೋ ಇಂಡಿಯಾಸ್ ಗಾಟ್ ಲೇಟೆಂಟ್ ನಲ್ಲಿ ಭಾಗವಹಿಸಿದ್ದ ವೇಳೆ ನೀಡಿದ್ದ ಹೇಳಿಕೆಗಳಿಂದ ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲಾಹಾಬಾದಿಯಾಗೆ ಮತ್ತಷ್ಟು ತೊಂದರೆಯುಂಟಾಗಿದೆ.
31 ವರ್ಷದ ರಣವೀರ್ ಅಲ್ಲಾಬಾದಿಯಾ ತಮ್ಮ ಹೇಳಿಕೆ ತೀವ್ರ ವಿವಾದಕ್ಕೆ ಸಿಲುಕಿದಾಗ ಕ್ಷಮೆ ಕೋರಿದರೂ ಕೂಡ ಅವರ ಹೇಳಿಕೆಗಳ ಸುತ್ತಲಿನ ವಿವಾದವು ದೊಡ್ಡ ಬಿಕ್ಕಟ್ಟಿಗೆ ಸಿಲುಕುತ್ತಿದೆ. ಶಿವಸೇನೆ (ಯುಬಿಟಿ) ಪಕ್ಷದ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಂಸದೀಯ ಸಮಿತಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
ಹಾಸ್ಯ, ವಿನೋದದ ಹೆಸರಿನಲ್ಲಿ ಯಾವುದೇ ನಿಂದನೀಯ ಭಾಷೆ ಮಿತಿಗಳನ್ನು ಮೀರಿದರೆ ಅದಕ್ಕೆ ಅರ್ಥವಿಲ್ಲ. ನಿಮಗೆ ಮಾತನಾಡಲು, ನಿಮ್ಮ ಪ್ರತಿಭೆ ತೋರಿಸಿಕೊಳ್ಳಲು ವೇದಿಕೆ ಸಿಗುತ್ತದೆ ಎಂದರೆ ನೀವು ಏನು ಬೇಕಾದರೂ ಮಾತನಾಡಬಹುದು ಎಂದರ್ಥವಲ್ಲ. ರಣವೀರ್ ಲಕ್ಷಾಂತರ ಮಂದಿ ಚಂದಾದಾರರನ್ನು ಹೊಂದಿರುವ ವ್ಯಕ್ತಿ, ಪ್ರತಿಯೊಬ್ಬ ರಾಜಕಾರಣಿಯೂ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಕುಳಿತು ಮಾತನಾಡಿದ್ದಾರೆ. ಪ್ರಧಾನ ಮಂತ್ರಿಗಳು ಅವರಿಗೆ ಪ್ರಶಸ್ತಿ ನೀಡಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸ್ಥಾಯಿ ಸಮಿತಿಯ ಸದಸ್ಯೆಯಾಗಿ, ನಾನು ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಏನಿದು ವಿವಾದ
ರಣವೀರ್ ಅಲಾಹಾಬಾದಿಯಾ ಅವರು ಸಾಕಷ್ಟು ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿ ಫೇಮಸ್ ಆದವರು. ಅವರ ‘ಬೀರ್ ಬೈಸೆಪ್ಸ್’ ಯೂಟ್ಯೂಬ್ ಚಾನೆಲ್ ಬರೋಬ್ಬರಿ 82 ಲಕ್ಷ ಸಬ್ಸ್ಕ್ರೈಬರ್ಗಳನ್ನು ಒಳಗೊಂಡಿದೆ. ಇತ್ತೀಚೆಗೆ ಅವರು ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋಗೆ ಅತಿಥಿಯಾಗಿ ಬಂದಿದ್ದರು.
ಶೋನಲ್ಲಿ ಪರ್ಫಾರ್ಮ್ ಮಾಡಲು ಬಂದ ಸ್ಪರ್ಧಿಗೆ ರಣವೀರ್ ಅವರು ಪ್ರಶ್ನೆ ಒಂದನ್ನು ಕೇಳಿದ್ದರು. ‘ನಿಮ್ಮ ಜೀವನದುದ್ದಕ್ಕೂ ನಿಮ್ಮ ಹೆತ್ತವರು ಪ್ರತಿದಿನ ಲೈಂಗಿಕತೆಯನ್ನು ಹೊಂದುವುದನ್ನು ನೀವು ನೋಡುತ್ತೀರಾ ಅಥವಾ ಒಮ್ಮೆ ಅವರ ಜೊತೆ ಸೇರಿ ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀರಾ’ ಎಂದು ಕೇಳಿದ್ದರು.
ಈ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ಅನೇಕ ನಾಯಕರು ಇದನ್ನು ವಿರೋಧಿಸಿದ್ದಾರೆ. ಮಹರಾಷ್ಟ್ರ ಮಹಿಳಾ ಕಮಿಷನ್ನವರು ಮುಂಬೈ ಕಮಿಷನರ್ಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಎಫ್ಐಆರ್ ದಾಖಲು ಮಾಡಲಾಗಿದೆ.
Advertisement