
ಇಂಫಾಲ್: ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ನಾಯಕತ್ವ ಬಿಕ್ಕಟ್ಟಿನ ನಡುವೆಯೇ, ಭಾರತೀಯ ಜನತಾ ಪಕ್ಷದ ನಿಯೋಗ ಮಂಗಳವಾರ ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿ ಮಾಡಿದೆ.
ಇಂದು ಸಂಜೆ ಇಂಫಾಲ್‌ನ ರಾಜಭವನಕ್ಕೆ ತೆರಳಿದ ಬಿಜೆಪಿ ಈಶಾನ್ಯ ಉಸ್ತುವಾರಿ ಸಂಬಿತ್ ಪಾತ್ರ ಮತ್ತು ಪಕ್ಷದ ರಾಜ್ಯಾಧ್ಯಕ್ಷೆ ಎ ಶಾರದಾ ದೇವಿ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತು.
ಬಿಜೆಪಿ ನಾಯಕರು ರಾಜ್ಯಪಾಲರೊಂದಿಗೆ ಸುಮಾರು ಅರ್ಧ ಘಂಟೆಯವರೆಗೆ ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಆದರೆ ಮಾತುಕತೆಯ ವಿವರ ಇನ್ನೂ ತಿಳಿದುಬಂದಿಲ್ಲ.
ರಾಜ್ಯ ಬಿಜೆಪಿಯಲ್ಲಿ ಹೆಚ್ಚುತ್ತಿರುವ ಅಸಮಾಧಾನ ಮತ್ತು ನಾಯಕತ್ವದ ಬದಲಾವಣೆಯ ಒತ್ತಡದ ನಡುವೆ, ಬಿರೇನ್ ಸಿಂಗ್ ಅವರು ಕಳೆದ ಭಾನುವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಇದುವರೆಗೂ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿಲ್ಲ.
ಈಶಾನ್ಯ ರಾಜ್ಯ ಮೇ 2023 ರಿಂದ ಜನಾಂಗೀಯ ಹಿಂಸಾಚಾರದಿಂದ ನರಳುತ್ತಿದೆ. ಜನಾಂಗೀಯ ಹಿಂಸಾಚಾರದಲ್ಲಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.
Advertisement