
ಪ್ರಯಾಗ್ ರಾಜ್: ಉತ್ತರ ಪ್ರದೇಶದಲ್ಲಿ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ವೇಳೆ ಮಾಘಿ ಪೂರ್ಣಿಮೆ ದಿನವಾದ ಬುಧವಾರ ಸಂಜೆ 6 ಗಂಟೆಯವರೆಗೂ ಸುಮಾರು 6 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಮಂಗಳವಾರವೇ ಪ್ರಯಾಗ್ ರಾಜ್ ಗೆ ಬಂದಿದ್ದ ಅನಿಲ್ ಕುಂಬ್ಳೆ, ಸಾಮಾನ್ಯ ಭಕ್ತರಂತೆ ಸಂಗಮದವರೆಗೂ ದೋಣಿಯಲ್ಲಿ ಸಾಗಿ, ಅರ್ಘ್ಯ ಅರ್ಪಿಸುವುದರೊಂದಿಗೆ ಪತ್ನಿ ಚೈತನ ರಾಮತೀರ್ಥ ಅವರೊಂದಿಗೆ ಪುಣ್ಯ ಸ್ನಾನ ಮಾಡಿದ್ದಾರೆ.
ಇಂದು ಬೆಳಗ್ಗೆಯಿಂದ ಆರಂಭವಾದ ಭಕ್ತರ ಪುಣ್ಯ ಸ್ನಾನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಳಗ್ಗೆ 4 ಗಂಟೆಯಿಂದಲೇ ತನ್ನ ನಿವಾಸದಲ್ಲಿ ಸ್ಥಾಪಿಸಲಾದ ವಾರ್ ರೂಮ್ ನಲ್ಲಿದ್ದು, ಮಹಾಕುಂಭ ಮೇಳದ ಭದ್ರತೆಯನ್ನು ಪರಿಶೀಲಿಸಿದ್ದಾರೆ.
ಮಾಘಿ ಪೂರ್ಣಿಮೆಯ 'ಸ್ನಾನ'ದೊಂದಿಗೆ ಸಾಧು ಸಂತರ ವಾಸ ಮುಕ್ತಾಯವಾಗಲಿದೆ. ಸುಮಾರು 10 ಲಕ್ಷ ಸಾಧು ಸಂತರು, ಮಹಾ ಕುಂಭದಿಂದ ಹೊರಡಲು ಪ್ರಾರಂಭಿಸುತ್ತಾರೆ. ಹೀಗಾಗಿ ಭಕ್ತರು ಸಂಚಾರ ನಿಯಮ ಪಾಲಿಸುವಂತೆ ಆಡಳಿತ ಮನವಿ ಮಾಡಿದೆ.
ಈ ಮಧ್ಯೆ ಲಕ್ಷಾಂತರ ಭಕ್ತರು ಸಂಗಮದತ್ತ ಹರಿದುಬರುತ್ತಿದ್ದು, ಬುಧವಾರ ಸಂಜೆ 6 ಗಂಟೆಯವರೆಗೂ ಸುಮಾರು 2 ಕೋಟಿ ಭಕ್ತರು ತ್ರಿವೇಣಿ ಸಂಗಮ ಮತ್ತಿತರ ಘಟ್ಟಗಳಲ್ಲಿ ಸ್ನಾನ ಮಾಡಿದ್ದಾರೆ. ಮಹಾಕುಂಭ ಮೇಳ ಆರಂಭವಾದಾಗಿನಿಂದ ಇಲ್ಲಿಯವರೆಗೂ ಒಟ್ಟಾರೇ 47 ಕೋಟಿ ಜನರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ.
ಎಲ್ಲಾ ಕಡೆಗಳಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಜನದಟ್ಟಣೆ ನಿಯಂತ್ರಿಸಲಾಗುತ್ತಿದೆ ಎಂದು ಮಹಾಕುಂಭ ಮೇಳ ಡಿಐಜಿ ವೈಭವ್ ಕೃಷ್ಣ ಹೇಳಿದ್ದಾರೆ. ವಸಂತ ಪಂಚಮಿ ದಿನದಂದು ಮಾಡಿದ್ದಂತೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಜನದಟ್ಟಣೆಯನ್ನು ಸುಲಭವಾಗಿ ನಿಯಂತ್ರಿಸಲಾಗುತ್ತಿದೆ ಎಂದು ಮಹಾಕುಂಭ ಮೇಳೆ SSP ರಾಜೇಶ್ ದ್ವಿವೇದಿ ತಿಳಿಸಿದ್ದಾರೆ. ಮಹಾಶಿವರಾತ್ರಿ ದಿನವಾದ ಫೆ.26 ರಂದು ಮಹಾಕುಂಭ ಮೇಳ ಮುಕ್ತಾಯವಾಗಲಿದೆ.
Advertisement