
ಚೆನ್ನೈ: ಪ್ರಧಾನಿ-ಟ್ರಂಪ್ ಭೇಟಿಯ ಬಗ್ಗೆ ವ್ಯಂಗ್ಯ ಚಿತ್ರ ಪ್ರಕಟಿಸಿದ್ದ ವೆಬ್ ಸೈಟ್ ವಿಕಟನ್ ಗೆ ನಿಷೇಧ ವಿಧಿಸಲಾಗಿದೆ.
ವಿಕಟನ್ ಗೆ ನಿಷೇಧ ವಿಧಿಸಿರುವುದರ ಬಗ್ಗೆ ಬಿಜೆಪಿ-ಡಿಎಂಕೆ ವಾಕ್ಸಮರದಲ್ಲಿ ತೊಡಗಿವೆ. ಈ ಕಾರ್ಟೂನ್ ಪಂಜಾಬ್‌ನಲ್ಲಿ ಬಂದಿಳಿದ ಮಿಲಿಟರಿ ವಿಮಾನದಲ್ಲಿ ಅಮೆರಿಕದಿಂದ ಗಡೀಪಾರು ಮಾಡಲಾದ 300 ಕ್ಕೂ ಹೆಚ್ಚು ಅಕ್ರಮ ಭಾರತೀಯ ವಲಸಿಗರ ಕುರಿತಾಗಿ ರಚನೆಯಾಗಿತ್ತು.
ಫೆ.15 ರಂದು (ಶನಿವಾರ) ರಾತ್ರಿ 11.46 ಕ್ಕೆ ಎಕ್ಸ್ ಪೋಸ್ಟ್‌ನಲ್ಲಿ, ವಿಕಟನ್ ತನ್ನ ಹಲವಾರು ಓದುಗರಿಗೆ ವೆಬ್‌ಸೈಟ್ ನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿತ್ತು ಅಷ್ಟೇ ಅಲ್ಲದೇ ಕೇಂದ್ರ ಯಾವುದೇ ನಿರ್ಬಂಧದ ಬಗ್ಗೆ ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ ಎಂದು ಹೇಳಿದೆ.
"ನಾವು ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಿದ್ದೇವೆ ಮತ್ತು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಈ ಕವರ್ ಕಾರಣದಿಂದಾಗಿ ಕೇಂದ್ರವು ವೆಬ್‌ಸೈಟ್ ನ್ನು ನಿರ್ಬಂಧಿಸಿದರೆ, ನಾವು ಅದನ್ನು ಕಾನೂನುಬದ್ಧವಾಗಿ ಎದುರಿಸುತ್ತೇವೆ" ಎಂದು ವಿಕಟನ್ ಹೇಳಿದೆ. ಕೆಲವು ಐಎಸ್‌ಪಿಗಳು ಅಥವಾ ಇಂಟರ್ನೆಟ್ ಸೇವಾ ಪೂರೈಕೆದಾರರು ತಮಿಳುನಾಡು ಸೇರಿದಂತೆ ಕೆಲವು ಸ್ಥಳಗಳಿಗೆ ಪ್ರವೇಶವನ್ನು ನಿರ್ಬಂಧಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಪ್ರಕಟಿಸಿತ್ತು.
ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ವ್ಯಂಗ್ಯಚಿತ್ರದ ವಿರುದ್ಧ ಭಾರತೀಯ ಪತ್ರಿಕಾ ಮಂಡಳಿ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಎಲ್ ಮುರುಗನ್ ಅವರಿಗೆ ದೂರು ನೀಡಿದ ನಂತರ ಈ ವ್ಯಂಗ್ಯಚಿತ್ರ ವಿವಾದಕ್ಕೀಡಾಗಿತ್ತು.
"ತಮಿಳುನಾಡು ಬಿಜೆಪಿ ಪರವಾಗಿ, ನಾವು ಇಂದು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರಿಗೆ ಮತ್ತು ನಮ್ಮ ರಾಜ್ಯ ಸಚಿವ ಎಲ್ ಮುರುಗನ್ ಅವರಿಗೆ ಎರಡು ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದೇವೆ. ಡಿಎಂಕೆಯ ಮುಖವಾಣಿಯಾಗಿರುವ ಮತ್ತು ನಮ್ಮ ಪ್ರಧಾನಿ ಮೋದಿಯವರ ವಿರುದ್ಧ ಆಕ್ರಮಣಕಾರಿ ಮತ್ತು ಆಧಾರರಹಿತ ವಿಷಯವನ್ನು ಪ್ರಕಟಿಸಿದ್ದಕ್ಕಾಗಿ ವಿಕಟನ್ ನಿಯತಕಾಲಿಕೆಯ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಕೋರಿದ್ದೇವೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
"ಪತ್ರಿಕಾ ಸ್ವಾತಂತ್ರ್ಯವು ನಕಲಿ ಮತ್ತು ಮಾನಹಾನಿಕರ ಬರಹಗಳನ್ನು ಪ್ರಕಟಿಸುವ ಮೂಲಕ ರಾಜಕೀಯ ನಾಯಕನನ್ನು ದೂಷಿಸಲು ಪತ್ರಿಕೆಗೆ ಪರವಾನಗಿ ನೀಡುವುದಿಲ್ಲ" ಎಂದು ಅಣ್ಣಾಮಲೈ ಹೇಳಿದ್ದಾರೆ.
ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ, ವೆಬ್‌ಸೈಟ್‌ಗೆ ಪ್ರವೇಶವನ್ನು ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ. ಇಂತಹ ಸೆನ್ಸಾರ್‌ಶಿಪ್ ಉತ್ತಮ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಅನುಕೂಲಕರವಲ್ಲ ಎಂದು ಸ್ಟ್ಯಾಲಿನ್ ಹೇಳಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಈ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement