
ರಾಂಚಿ: ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಮಂದಿ ಸಾವನ್ನಪ್ಪಿದ ಒಂದು ದಿನದ ನಂತರ, ಭಾನುವಾರ ರಾಂಚಿ ರೈಲು ನಿಲ್ದಾಣದಲ್ಲೂ ಅದೇ ರೀತಿಯ ಅವ್ಯವಸ್ಥೆ ಕಂಡು ಬಂದಿದೆ.
ಉತ್ತರ ಪ್ರದೇಶ ಮತ್ತು ದೆಹಲಿಗೆ ಹೋಗುವ ರೈಲುಗಳನ್ನು ಹತ್ತಲು ರಾಂಚಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಭಾರೀ ಜನಸಂದಣಿಯಲ್ಲಿ ಐವರು ಮಹಿಳೆಯರು ಉಸಿರುಗಟ್ಟಿ ಪ್ರಜ್ಞೆ ತಪ್ಪಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, 12817 ಜಾರ್ಖಂಡ್ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ರಾಂಚಿ ನಿಲ್ದಾಣವನ್ನು ತಲುಪಿದಾಗ, ಅದು ಈಗಾಗಲೇ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಟಿಕೆಟ್ ಇಲ್ಲದ ಪ್ರಯಾಣಿಕರು ರೈಲು ಹತ್ತಿ ಒಳಗಿನಿಂದ ಬಾಗಿಲು ಲಾಕ್ ಮಾಡಿದ್ದರು. ಟಿಕೆಟ್‌ಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸಲು ಕಾಯುತ್ತಿದ್ದವರು ಬಾಗಿಲು ತೆರೆಯುವಂತೆ ಬೇಡಿಕೊಳ್ಳುತ್ತಿದ್ದರು.
ಆರ್‌ಪಿಎಫ್ ಜವಾನರು ಬೋಗಿಗಳನ್ನು ಪ್ರವೇಶಿಸಲು ಯತ್ನಿಸಿ ವಿಫಲವಾದರು.
ನಿಜವಾದ ಟಿಕೆಟ್ ಹೊಂದಿರುವ ಕೆಲವು ಪ್ರಯಾಣಿಕರು ಕೆಲವು ಬೋಗಿಗಳನ್ನು ಪ್ರವೇಶಿಸುವಲ್ಲಿ ಯಶಸ್ವಿಯಾದರೂ, 60ಕ್ಕೂ ಹೆಚ್ಚು ಪ್ರಯಾಣಿಕರು ರೈಲು ಹಿಡಿಯಲು ಸಾಧ್ಯವಾಗಲಿಲ್ಲ. ಈ ವೇಳೆ 18 ಮಹಿಳೆಯರ ಗುಂಪು ಉಸಿರುಗಟ್ಟುವಿಕೆಯ ಭಯದಿಂದ ರೈಲು ಹತ್ತಲಿಲ್ಲ.
ಏತನ್ಮಧ್ಯೆ, ಗುಂಪಿನಲ್ಲಿದ್ದ ಐವರು ಮಹಿಳೆಯರು ಜನಸಂದಣಿಯಲ್ಲಿ ಉಸಿರುಗಟ್ಟಿ ಮೂರ್ಛೆ ಹೋದರು. ಗುಂಪಿನಲ್ಲಿದ್ದ ಇತರರು ಅವರನ್ನು ಜನಸಂದಣಿಯಿಂದ ಬೇರ್ಪಡಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.
ಹಲವು ಪ್ರಯಾಣಿಕರು ರೈಲು ಹತ್ತಿದರು. ಆದರೆ ಅವರ ಕುಟುಂಬ ಸದಸ್ಯರು ನಿಲ್ದಾಣದಲ್ಲಿಯೇ ಉಳಿದಿದ್ದರು.
ಹಿರಿಯ ರೈಲ್ವೆ ಅಧಿಕಾರಿಗಳ ಪ್ರಕಾರ, ಸೂಕ್ತ ಮೇಲ್ವಿಚಾರಣೆ ನಡೆಸಲಾಗುತ್ತಿದ್ದು, ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಆರ್‌ಪಿಎಫ್ ಅನ್ನು ನಿಯೋಜಿಸಲಾಗಿದೆ. ರೈಲುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಟಿಕೆಟ್‌ಗಳನ್ನು ನೀಡುವಂತೆ ವಾಣಿಜ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಭಾನುವಾರವಾದ ಕಾರಣ ಅನೇಕ ಭಕ್ತರು ಕುಂಭಮೇಳಕ್ಕೆ ಪ್ರಯಾಣಿಸುತ್ತಿದ್ದರು, ಇದರಿಂದಾಗಿ ಜನದಟ್ಟಣೆ ಹೆಚ್ಚಾಗಿದೆ. ಆದರೆ ಅದು ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಂಭಮೇಳದ ಕಾರಣ ರೈಲುಗಳಲ್ಲಿ ಸಾಕಷ್ಟು ಜನದಟ್ಟಣೆ ಇದೆ ಎಂದು ರಾಂಚಿ ರೈಲ್ವೆ ವಿಭಾಗದ ಡಿಆರ್‌ಎಂ ಜಸ್ಮಿತ್ ಸಿಂಗ್ ಬಿಂದ್ರಾ ಅವರು ಹೇಳಿದ್ದಾರೆ.
Advertisement