
ರಾಂಚಿ: ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನಕ್ಕೆ ತೆರಳಿದ್ದ ತನ್ನ ಸ್ನೇಹಿತನ 12ನೇ ತರಗತಿಯ JAC (ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್) ಬೋರ್ಡ್ ಪರೀಕ್ಷೆ ಬರೆಯುತ್ತಿದ್ದ ಯುವಕನನ್ನು ಬಂಧಿಸಲಾಗಿದೆ. ಪ್ರಿನ್ಸ್ ಎಂಬಾತ ತಪಾಸಣೆ ವೇಳೆ ಸಿಕ್ಕಿಬಿದಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.
ಹಜಾರಿಬಾಗ್‌ನ ಕೆರೆದರಿ ಪೊಲೀಸ್ ಠಾಣೆ ವ್ಯಾಪ್ತಿಯ ಜೋಕೊ ಗ್ರಾಮದ ನಿವಾಸಿಯಾದ ಪ್ರಿನ್ಸ್ ಕುಮಾರ್ ಚತ್ರದ ತಾಂಡ್ವಾದಲ್ಲಿರುವ ವನಂಚಲ್ ಇಂಟರ್ ಕಾಲೇಜಿನ ವಿದ್ಯಾರ್ಥಿ ರೋಹಿತ್ ಕುಮಾರ್ ಸಾವೊ ಪರವಾಗಿ ಶನಿವಾರ ಪರೀಕ್ಷೆ ಬರೆಯುತ್ತಿದ್ದ.
ಇದು ತಪಾಸಣೆ ವೇಳೆ ಗೊತ್ತಾದ ಕೂಡಲೇ ಪ್ರಿನ್ಸಿಪಾಲ್-ಕಮ್-ಸೆಂಟರ್ ಸೂಪರಿಂಟೆಂಡೆಂಟ್ ನೀರಜ್ ಕುಮಾರ್ ತಾಂಡ್ವಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಿನ್ಸ್ ನನ್ನು ಬಂಧಿಸಲಾಗಿದೆ. ತನ್ನ ಸ್ನೇಹಿತ ರೋಹಿತ್ ಕುಮಾರ್ ಕುಂಭಮೇಳದ ವೇಳೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ತೆರಳಿದ್ದ . ಹೀಗಾಗಿ ಆತನ ಪರೀಕ್ಷೆ ಬರೆಯುತ್ತಿದ್ದಾಗಿ ವಿಚಾರಣೆ ವೇಳೆ ಪ್ರಿನ್ಸ್ ಕುಮಾರ್ ಬಹಿರಂಗಪಡಿಸಿದ್ದಾನೆ.
ಇಂಗ್ಲೀಷ್ ಪತ್ರಿಕೆ ಬರೆಯುತ್ತಿದ್ದಾಗ ಆತ ಸಿಕ್ಕಿ ಬಿದ್ದಿರುವುದಾಗಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ನೀರಾಜ್ ಕುಮಾರ್ ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರ ದೂರಿನ ಆಧಾರದ ಮೇಲೆ ಪರೀಕ್ಷೆಯಲ್ಲಿ ಅವ್ಯವಹಾರದ ಪ್ರಕರಣವನ್ನು ದಾಖಲಿಸಿ, ಪ್ರಿನ್ಸ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ತಾಂಡ್ವಾ ಪೊಲೀಸ್ ಠಾಣೆಯ ಕಚೇರಿ ಪ್ರಭಾರಿ ಉಮೇಶ್ ರಾಮ್ ತಿಳಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಫೆಬ್ರವರಿ 11 ರಿಂದ ಜೆಎಸಿ ಬೋರ್ಡ್‌ನ ಮೆಟ್ರಿಕ್ಯುಲೇಷನ್ ಮತ್ತು ಮಧ್ಯಂತರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ, ಇದಕ್ಕಾಗಿ 7.84 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು,1,297 ಪರೀಕ್ಷಾ ಕೇಂದ್ರಗಳಲ್ಲಿ 4.33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದಾರೆ. 789 ಕೇಂದ್ರಗಳಲ್ಲಿ 3.50 ಲಕ್ಷ ವಿದ್ಯಾರ್ಥಿಗಳು ಮಧ್ಯಂತರ ಪರೀಕ್ಷೆ ಬರೆಯುತ್ತಿದ್ದಾರೆ. ಈ ಹಿಂದೆ 10 ಮತ್ತು 12 ನೇ ತರಗತಿಯ ಪರೀಕ್ಷೆಯನ್ನು ಮಾರ್ಚ್ 3 ರಂದು ಮುಕ್ತಾಯಗೊಳಿಸಲು ನಿಗದಿಗೊಳಿಸಲಾಗಿತ್ತು. ಆದರೆ ಅದು ಈಗ ಮಾರ್ಚ್ 4 ರಂದು ಮುಕ್ತಾಯಗೊಳ್ಳಲಿದೆ.
Advertisement