
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಮಾಡಿದ ಆರೋಪಗಳ ಬಗ್ಗೆ ಕೇಂದ್ರ ಸರ್ಕಾರ ಏಕೆ ಪ್ರತಿಕ್ರಿಯಿಸಿಲ್ಲ ಎಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ವಿಭಾಗೀಯ ಪೀಠ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ ಅವರನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಚನೆಗಳನ್ನು ಪಡೆಯುವಂತೆ ಕೇಳಿತು.
ರಾಹುಲ್ ಗಾಂಧಿಯವರ ಬ್ರಿಟಿಷ್ ಪೌರತ್ವವನ್ನು ವಿವರಿಸುವಂತೆ ಸರ್ಕಾರ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ ಎಂದು ಸ್ವಾಮಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ರಾಹು ಗಾಂಧಿಯವರ ಕಡೆಯಿಂದ ಶೋಕಾಸ್ ನೋಟಿಸ್ ಗೆ ಯಾವುದೇ ಉತ್ತರ ಬಂದಿಲ್ಲ ಮತ್ತು ನೋಟಿಸ್ ಗೆ ಉತ್ತರ ಬಾರದೇ ಇದ್ದ ನಂತರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
"ಗೃಹ ಸಚಿವಾಲಯಕ್ಕೆ ನಾನು ಬರೆದ ಪತ್ರದ ಮೇರೆಗೆ ಭಾರತ ಸರ್ಕಾರ ಗಾಂಧಿಯವರಿಗೆ ಶೋಕಾಸ್ ನೋಟಿಸ್ ಬರೆದು, ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆಂದು ತೋರಿಸಲು ದಾಖಲೆಯಲ್ಲಿ ತಂದಿರುವ ದತ್ತಾಂಶವನ್ನು ವಿವರಿಸುವಂತೆ ಸೂಚಿಸಿತು. ಭಾರತೀಯ ಕಾನೂನಿನಡಿಯಲ್ಲಿ, ಯಾವುದೇ ಭಾರತೀಯನು ಬೇರೆ ಯಾವುದೇ ದೇಶದ ಪೌರತ್ವವನ್ನು ಹೊಂದಲು ಸಾಧ್ಯವಿಲ್ಲ. ಇದಕ್ಕೆ ಎಂದಿಗೂ ಉತ್ತರಿಸಲಾಗಿಲ್ಲ, ಯಾವುದೇ ಜ್ಞಾಪನೆಗಳನ್ನು ಕಳುಹಿಸಲಾಗಿಲ್ಲ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರವು ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಬೇಕು" ಎಂದು ಸ್ವಾಮಿ ವಾದಿಸಿದ್ದಾರೆ.
ಇದರ ಹಿನ್ನೆಲೆಯಲ್ಲಿ, ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿದೆ. ಸ್ವಾಮಿ ಅವರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆಯ ಸ್ಥಿತಿಯ ಕುರಿತು ಸೂಚನೆಗಳನ್ನು ಪಡೆಯಲು ASG ಅವರಿಗೆ ನ್ಯಾಯಾಲಯ ಸೂಚನೆ ನೀಡಿದೆ.
Advertisement