
ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿರುವ ಹಲವು ಸ್ಥಳಗಳ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಹೆಚ್ಚಾಗಿದ್ದು, ಸ್ನಾನಕ್ಕೆ ಯೋಗ್ಯವಲ್ಲ ಎಂಬ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯನ್ನೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರಸ್ಕರಿಸಿದ್ದಾರೆ ಎಂದು NDTV ವರದಿ ಮಾಡಿದೆ.
ಪ್ರಯಾಗ್‌ರಾಜ್ ನ ಸಂಗಮದಲ್ಲಿನ ನೀರು "ಕುಡಿಯಲು ಯೋಗ್ಯವಾಗಿದೆ" ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮಹಾಕುಂಭಮೇಳದಲ್ಲಿ ಇದುವರೆಗೂ 54 ಕೋಟಿ ಜನ ಪುಣ್ಯಸ್ನಾನ ಮಾಡಿದ್ದಾರೆ ಮತ್ತು ನಿತ್ಯ ಲಕ್ಷಾಂತರ ಜನ ಗಂಗಾ ನದಿಯಲ್ಲಿ ಮಿಂದೇಳುತ್ತಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಗಂಗಾ ಮತ್ತು ಯಮುನಾ ನದಿಗೆ ಸಂಸ್ಕರಿಸದ ಕೊಳಚೆನೀರನ್ನು ಬಿಡಲಾಗಿದೆ ಎಂಬ ಆರೋಪದ ವಿಚಾರಣೆಯ ಸಂದರ್ಭದಲ್ಲಿ, ಮಹಾಕುಂಭದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದ ಮಲ ಬ್ಯಾಕ್ಟೀರಿಯಾ ಮತ್ತು ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇವೆ. ನೀರಿನ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ ಸ್ನಾನಕ್ಕೆ ಯೋಗ್ಯವಾಗಿಲ್ಲ. ಕುಂಭಮೇಳದಲ್ಲಿ ಕೋಟಿಗಟ್ಟಲೆ ಜನರು ಸ್ನಾನ ಮಾಡುವುದರಿಂದ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಹೆಚ್ಚಾಗುತ್ತೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ವರದಿಯಲ್ಲಿ ಹೇಳಿದೆ.
ಜನವರಿ 12 ಮತ್ತು 13 ರಂದು ನಡೆದ ನೀರಿನ ಗುಣಮಟ್ಟದ ಮೇಲ್ವಿಚಾರಣೆಯ ಫಲಿತಾಂಶಗಳು ಈ ನೀರು ಕುಡಿಯುವುದಕ್ಕಾಗಲಿ, ಸ್ನಾನ ಮಾಡುವುದಕ್ಕಾಗಲಿ ಯೋಗ್ಯವಾಗಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) NGT ಗೆ ವರದಿ ಸಲ್ಲಿಸಿದೆ.
Advertisement