
ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇಖಾ ಗುಪ್ತಾ ಅವರನ್ನು ಗುರುವಾರ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ಅವರು ತಳಮಟ್ಟದಿಂದ ಮೇಲೆ ಬಂದಿದ್ದಾರೆ ಮತ್ತು ನಗರದ ಅಭಿವೃದ್ಧಿಗೆ ಹೆಚ್ಚು ಹುರುಪಿನಿಂದ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲ ಬಾರಿಗೆ ಬಿಜೆಪಿ ಶಾಸಕಿಯಾಗಿರುವ ರೇಖಾ ಗುಪ್ತಾ ಅವರು ಇಂದು ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರೇಖಾ ಗುಪ್ತಾ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ, "ಅವರು ತಳಮಟ್ಟದಿಂದ ಮೇಲೆ ಬಂದಿದ್ದಾರೆ. ಕ್ಯಾಂಪಸ್ ರಾಜಕೀಯ, ರಾಜ್ಯ ಸಂಘಟನೆ, ಪುರಸಭೆ ಆಡಳಿತದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಈಗ ಶಾಸಕಿ ಹಾಗೂ ಮುಖ್ಯಮಂತ್ರಿಯಾಗಿದ್ದಾರೆ" ಎಂದು ಪ್ರಧಾನಿ ಮೋದಿ ಅಭಿನಂದನಾ ಸಂದೇಶವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ದೆಹಲಿಯ ಅಭಿವೃದ್ಧಿಗಾಗಿ ಅವರು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರ ಅಧಿಕಾರಾವಧಿ ಫಲಪ್ರದವಾಗಲಿ ಎಂದು ಹಾರೈಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಗುಪ್ತಾ ಅವರೊಂದಿಗೆ ಪರ್ವೇಶ್ ವರ್ಮಾ, ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ಕಪಿಲ್ ಮಿಶ್ರಾ, ರವೀಂದರ್ ಇಂದ್ರಜ್ ಸಿಂಗ್ ಮತ್ತು ಪಂಕಜ್ ಸಿಂಗ್ ಅವರು ದೆಹಲಿಯ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಇಂದು ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆಗೆ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಹಿರಿಯ ನಾಯಕರು ಉಪಸ್ಥಿತರಿದ್ದರು.
Advertisement