ದೆಹಲಿಗೆ ಮಹಿಳಾ ಮುಖ್ಯಮಂತ್ರಿ ಆಯ್ಕೆ ನಿರ್ಧಾರ ಫೆಬ್ರವರಿ 5ರ ಸಂಜೆಯೇ ಆಗಿತ್ತು; ಆರಂಭದಿಂದಲೇ ರೇಖಾ ಗುಪ್ತಾ ಹೆಸರು ಮುಂಚೂಣಿಯಲ್ಲಿ!

ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಪಕ್ಷ ಮಹಿಳಾ ಸಬಲೀಕರಣದಲ್ಲಿ ಬದ್ಧವಾಗಿದೆ ಎಂದು ಈ ಮೂಲಕ ತೋರಿಸಿದಂತಾಗಿದೆ.
Rekha Gupta
ರೇಖಾ ಗುಪ್ತಾ
Updated on

ನವದೆಹಲಿ: ಬಿಜೆಪಿಯಿಂದ ದೆಹಲಿಯ ನೂತನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಫೆಬ್ರವರಿ 5 ರಂದು ದೆಹಲಿ ವಿಧಾನಸಭೆ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಮಹಿಳೆಯನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತಂತೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಪಕ್ಷ ಮಹಿಳಾ ಸಬಲೀಕರಣದಲ್ಲಿ ಬದ್ಧವಾಗಿದೆ ಎಂದು ಈ ಮೂಲಕ ತೋರಿಸಿದಂತಾಗಿದೆ. ಮುಂದಿನ ತಿಂಗಳು ಮಾರ್ಚ್ 8ರಂದು ನಡೆಯಲಿರುವ ಮಹಿಳಾ ದಿನಾಚರಣೆಗೆ ಮುಂಚಿತವಾಗಿ ಮಹಿಳೆಯನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಗುರಿ ಪಕ್ಷದ ನಾಯಕರದ್ದಾಗಿತ್ತು ಎಂದು ತಿಳಿದುಬಂದಿದೆ.

ನಿನ್ನೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರೇಖಾ ಗುಪ್ತಾ ಅವರನ್ನು ದೆಹಲಿ ವಿಧಾನಸಭೆಯ ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಬಿಜೆಪಿ ನಾಯಕರಾದ ರವಿಶಂಕರ್ ಪ್ರಸಾದ್, ಒ ಪಿ ಧಂಕರ್, ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಮತ್ತು ಇತರರೊಂದಿಗೆ 50 ವರ್ಷದ ರೇಖಾ ಗುಪ್ತಾ ಸಭೆ ಮುಗಿದ ಬಳಿಕ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಇಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಫೆಬ್ರವರಿ 5ರಂದು ಮತದಾನದ ದಿನದ ಸಂಜೆ ನಡೆದ ಚರ್ಚೆಗಳಲ್ಲಿ ರೇಖಾ ಗುಪ್ತಾ ಹೆಸರು ಮುಂಚೂಣಿಯಲ್ಲಿತ್ತು ಎಂದು ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ. ದೆಹಲಿ ಫಲಿತಾಂಶಗಳ ನಂತರದ ಸಭೆಗಳಲ್ಲಿ ಅವರ ಹೆಸರು ನಿರಂತರವಾಗಿ ಪ್ರಸ್ತಾಪವಾಗುತ್ತಿತ್ತು. ಫ್ರಾನ್ಸ್ ಮತ್ತು ಅಮೆರಿಕಕ್ಕೆ ಭೇಟಿ ನೀಡುವ ಮೊದಲು ಪ್ರಧಾನಿಯವರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು.

ನಿನ್ನೆ ಬುಧವಾರ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಇತರ ಹಿರಿಯ ನಾಯಕರೊಂದಿಗೆ ನಡೆದ ಸಭೆಯಲ್ಲಿ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು ಎಂದು ತಿಳಿದುಬಂದಿದೆ.

Rekha Gupta
ದೆಹಲಿಗೆ ಮಹಿಳಾ ಸಾರಥ್ಯ: ರೇಖಾ ಗುಪ್ತಾ ಸಂಪುಟಕ್ಕೆ ಪರ್ವೇಶ್ ವರ್ಮಾ, ಕಪಿಲ್ ಮಿಶ್ರಾ ಸೇರ್ಪಡೆ; 6 ಶಾಸಕರು ಸಚಿವರಾಗಿ ಇಂದು ಪ್ರಮಾಣ ವಚನ

ಕೇಂದ್ರ ವೀಕ್ಷಕರೊಂದಿಗೆ ನಡೆದ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ರೇಖಾ ಗುಪ್ತಾ ಹೆಸರನ್ನು ಅನುಮೋದನೆಗಾಗಿ ಸಲ್ಲಿಸಲಾಯಿತು. ವೀಕ್ಷಕರು ಪ್ರವೇಶ್ ವರ್ಮಾ, ಸತೀಶ್ ಉಪಾಧ್ಯಾಯ ಮತ್ತು ವಿಜೇಂದ್ರ ಗುಪ್ತಾ ಅವರಂತಹ ಇತರ ಸಂಭಾವ್ಯ ಅಭ್ಯರ್ಥಿಗಳೊಂದಿಗೆ ಪ್ರತ್ಯೇಕವಾಗಿ ಸಮಾಲೋಚಿಸಿದರು, ರಾಜ್ಯವನ್ನು ಅಭಿವೃದ್ಧಿಯ ಹೊಸ ಯುಗಕ್ಕೆ ಕೊಂಡೊಯ್ಯಲು ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡುವ ಪಕ್ಷದ ನಿರ್ಧಾರವನ್ನು ಅವರಿಗೆ ತಿಳಿಸಿದರು ಎಂದು ಪಕ್ಷದ ಆಂತರಿಕ ಮೂಲವು ಹೇಳುತ್ತದೆ.

ರೇಖಾ ಗುಪ್ತಾ ಅವರು ಪಂಜಾಬಿ, ಜಾಟ್, ಸಿಖ್, ದಲಿತ ಮತ್ತು ಪೂರ್ವಾಂಚಲಿ ಗುಂಪುಗಳು ಸೇರಿದಂತೆ ವಿವಿಧ ಸಮುದಾಯಗಳ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುತ್ತಾರೆ ಎಂದು ಹೇಳಿದರು. ದೆಹಲಿ ಸಿಎಂ ಸ್ಥಾನಕ್ಕೆ ಪ್ರಮುಖ ಸ್ಪರ್ಧಿಯಾಗಿದ್ದ ದೆಹಲಿ ಶಾಸಕ ಪ್ರವೇಶ್ ವರ್ಮಾ, ರೇಖಾ ಗುಪ್ತಾ ಅವರ ಹೆಸರನ್ನು ಪ್ರಸ್ತಾಪಿಸಿದರು. ಪ್ರಬಲ ಸ್ಪರ್ಧಿಗಳಾದ ಸತೀಶ್ ಉಪಾಧ್ಯಾಯ ಮತ್ತು ವಿಜೇಂದ್ರ ಗುಪ್ತಾ ಅವರು ಅವರ ಹೆಸರುಗಳನ್ನು ಸಹ ಅನುಮೋದಿಸಿದ್ದರು. ಇದು ದೆಹಲಿಯಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯ ಹೊಸ ಹಂತಕ್ಕೆ ಪಕ್ಷದ ಬದ್ಧತೆಯನ್ನು ಒತ್ತಿಹೇಳುತ್ತದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಸುಷ್ಮಾ ಸ್ವರಾಜ್ ಅವರೊಂದಿಗೆ ಒಮ್ಮೆ ಪರಿಗಣಿಸಲಾಗಿದ್ದ ಹರಿಯಾಣ ಅಂಶವೂ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಕಾರಣವಾಯಿತು.

ಫೆಬ್ರವರಿ 5 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಶಾಲಿಮಾರ್ ಬಾಗ್ ಸ್ಥಾನದಲ್ಲಿ ಎಎಪಿ ಅಭ್ಯರ್ಥಿ ಬಂದಾನ ಕುಮಾರಿ ಅವರನ್ನು 29,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. ಫೆಬ್ರವರಿ 8 ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದ 11 ದಿನಗಳ ನಂತರ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.

ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ಮತ್ತು ಅತಿಶಿ ನಂತರ ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿ ರೇಖಾ ಗುಪ್ತಾ ಆಗಲಿದ್ದಾರೆ. ಮಮತಾ ಬ್ಯಾನರ್ಜಿ ಜೊತೆಗೆ ಅವರು ದೇಶದ ಎರಡನೇ ಹಾಲಿ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ. ಅಲ್ಲದೆ, ಪ್ರಸ್ತುತ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ರೇಖಾ ಗುಪ್ತಾ ಏಕೈಕ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com