
ಹಮೀರ್ ಪುರ: ಹಿಮಾಚಲ ಪ್ರದೇಶದ ಸುಜಾನ್ ಪುರ ತಿರಾದಲ್ಲಿ ಮಸೀದಿ ಮುಂಭಾಗದಲ್ಲಿ ಮಹಾರಾಣಾ ಪ್ರತಾಪ್ ಪ್ರತಿಮೆ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯ ಸಲ್ಲಿಸಿದ್ದ ಆಕ್ಷೇಪಣೆಯನ್ನು ಹಿಂಪಡೆದಿದೆ. ಪ್ರತಿಮೆ ಸ್ಥಾಪನೆಗೆ ಮುಸ್ಲಿಂ ಸುಧಾರ್ ಸಭಾ ಬೆಂಬಲ ವ್ಯಕ್ತಪಡಿಸಿದೆ.
ಸಮುದಾಯದ ಕೆಲವರು ಪ್ರತಿಮೆ ಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಗರ ಪರಿಷತ್ ಕಾರ್ಯಕಾರಿ ಅಧಿಕಾರಿ ಅಜ್ಮೀರ್ ಠಾಕೂರ್ ಗುರುವಾರ ಹೇಳಿದ್ದಾರೆ. ವಾರ್ಡ್ ಸಂಖ್ಯೆ 4 ರಲ್ಲಿ ಮಸೀದಿಯ ಮುಂಭಾಗದ ಉದ್ಯಾನವನದಲ್ಲಿ ಮಹಾರಾಣಾ ಪ್ರತಾಪ್ ಪ್ರತಿಮೆಯನ್ನು ಸ್ಥಾಪಿಸದಂತೆ ಮುಸ್ಲಿಂ ಸಮುದಾಯದ ನಿಯೋಗವು ಹಮೀರ್‌ಪುರ ಆಡಳಿತಕ್ಕೆ ಮನವಿ ಸಲ್ಲಿಸಿದ ಎರಡು ದಿನಗಳ ನಂತರ ಈ ಬೆಳವಣಿಗೆಯಾಗಿದೆ.
ಮನವಿ ಪತ್ರಕ್ಕೆ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್, ಅನುಮೋದಿತ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸುವ ನಿರ್ಧಾರದಿಂದ ಹಿಂದೆ ಸರಿಯದಂತೆ ಆಡಳಿತಕ್ಕೆ ಹೇಳಿತ್ತು. ಈ ವಿಷಯದ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರಿಗೆ ಸೂಚಿಸಿದ್ದರು.
ಬುಧವಾರ ನನ್ನ ಕಚೇರಿಗೆ ಆಗಮಿಸಿದ್ದ ಮುಸ್ಲಿಂ ಸುಧಾರ್ ಸಭಾ ಮುಖ್ಯಸ್ಥರು ಹಾಗೂ ಸಮಿತಿ ಸದಸ್ಯರು ಪ್ರತಿಮೆ ಸ್ಥಾಪನೆಗೆ ಬೆಂಬಲ ವ್ಯಕ್ತಪಡಿಸಿರುವುದಾಗಿ ಪತ್ರ ಸಲ್ಲಿಸಿದ್ದಾರೆ. ಪಾರ್ಕ್ ನಲ್ಲಿ ಪ್ರತಿಮೆ ನಿರ್ಮಾಣವನ್ನು ಸ್ವಾಗತಿಸಿದ್ದು, ಎರಡೂ ಸಮುದಾಯಗಳು ಶಾಂತಿಯುತ ಸಹಭಾಳ್ವೆ ನಡೆಸಲು ಸಮಿತಿ ಮುಖಂಡರು ಹೇಳಿದ್ದಾರೆ ಎಂದು ಠಾಕೂರ್ ತಿಳಿಸಿದ್ದಾರೆ.
ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹಿಂಪಡೆದಿದ್ದೇವೆ ಎಂದು ಸಮಿತಿ ಸದಸ್ಯರು ಹೇಳಿದ್ದಾರೆ.
ಸೋಮವಾರ ರಾತ್ರಿ ಮುಸ್ಲಿಂ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿತ್ತು. ಈ ವಿಡಿಯೋ ವೈರಲ್ ಆಗಿತ್ತು. ಮಾರನೇ ದಿನ ಸ್ಥಳೀಯ ಸಂಸ್ಥೆ ಸೂಚಿಸಿದ್ದ ಸ್ಥಳದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಹೇಳಿತ್ತು. ಮಹಾರಾಣಾ ಪ್ರತಾಪ್ ಪ್ರತಿಮೆಗೆ ವಿರೋಧ ವ್ಯಕ್ತಪಡಿಸುವುದು ನ್ಯಾಯ ಸಮ್ಮತವಲ್ಲ. ಹೊರಗಡೆಯಿಂದ ಬಂದಿರುವ ಮುಸ್ಲಿಂ ಮುಖಂಡರು ಹಿಂದೂ ವಿರೋಧಿ ಭಾವನೆ ಸೃಷ್ಟಿಸುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಪಂಕಜ್ ಭಾರತೀಯ ಹೇಳಿದ್ದಾರೆ.
Advertisement