
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ನಡೆದ 98ನೇ ಅಖಿಲ ಭಾರತೀಯ ಮರಾಠಿ ಸಮ್ಮೇಳನದ ಉದ್ಘಾಟನಾ ಸಮಾರಂಭ ಮಾನವೀಯ ಸಂಬಂಧಗಳಿಂದ ಗಮನ ಸೆಳೆಯಿತು. ನರೇಂದ್ರ ಮೋದಿ ಅವರ ಆತ್ಮೀಯತೆ, ತೋರಿದ ಪ್ರೀತಿ, ನೆರವಿಗೆ NCP ಶರದ್ಚಂದ್ರ ಪವಾರ್ ಮುಖ್ಯಸ್ಥರಾದ ಶರದ್ ಪವಾರ್ ಅವರೇ ದಂಗಾದರು. ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದರು.
ಹೌದು. ವಿಜ್ಞಾನ ಭವನದಲ್ಲಿ ಇಂದು ಸಂಜೆ ಸಮ್ಮೇಳನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ, ತನ್ನೊಂದಿಗೆ ಸನ್ಮಾನ ಮಾಡಲು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಶರದ್ ಪವಾರ್ ಅವರಿಗೆ ಮನವಿ ಮಾಡಿದರು.
ತದನಂತರ ತನ್ನ ಮಾತು ಮುಗಿಸಿದ ಪವಾರ್, ಮೋದಿ ಅವರ ಪಕ್ಕದ ಆಸನಕ್ಕೆ ತೆರಳುತ್ತಿದ್ದಾಗ, ಅವರ ಕೈ ಹಿಡಿದು ಆಸನದಲ್ಲಿ ಕುಳಿತುಕೊಳ್ಳಲು ಪ್ರಧಾನಿ ನೆರವಾದರು. ಅಲ್ಲದೇ, ಕಪ್ ನಲ್ಲಿ ನೀರು ಕೊಟ್ಟು ಸಹಕರಿಸಿದರು.
ರಾಜಕೀಯ, ಸೈದ್ದಾಂತಿಕ ಭಿನ್ನಾಭಿಪ್ರಾಯ ಇದ್ದರೂ ಮೋದಿ ಅವರು ತೋರಿದ ಪ್ರೀತಿ, ವಿಶ್ವಾಸ ಕಂಡು ಶರದ್ ಪವಾರ್ ಅವರ ಮುಖದಲ್ಲಿ ಸಂತಸದ ಭಾವ ಆವರಿಸಿತ್ತು. ನೆರೆದಿದ್ದ ಪ್ರೇಕ್ಷಕರು ಕರತಾಡನ ಮೂಲಕ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಬಳಿಕ ಪ್ರಧಾನಿ ಮೋದಿ ಭಾಷಣ ಆರಂಭಿಸುತ್ತಿದ್ದಂತೆಯೇ, ಪವಾರ್ ಅವರ ಆಹ್ವಾನದ ಮೇರೆಗೆ ಕಾರ್ಯಕ್ರಮ ಉದ್ಘಾಟಿಸಲು ಒಪ್ಪಿಕೊಂಡಿದ್ದಾಗಿ ತಿಳಿಸಿದರು. ಪವಾರ್ ಅವರ ಆಹ್ವಾನದ ಮೇರೆಗೆ ಇಂದು ಈ ಹೆಮ್ಮೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಿತು ಎಂದು ಹೇಳಿದರು. ನಂತರ ಕಾರ್ಯಕ್ರಮದುದ್ದಕ್ಕೂ ಪ್ರಧಾನಿ ಮೋದಿ ಹಾಗೂ ಶರದ್ ಪವಾರ್ ಪ್ರೀತಿಯಿಂದ ಮಾತುಕತೆಯಲ್ಲಿ ತೊಡಗಿದ್ದು ಕಂಡುಬಂದಿತು.
Advertisement