
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ದೆಹಲಿಯ ಭಾರತ್ ಮಂಟಪದಲ್ಲಿ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್ (SOUL) ಸಮ್ಮೇಳನದ ಮೊದಲ ಆವೃತ್ತಿಯನ್ನು ಉದ್ಘಾಟಿಸಿದರು.
ರಾಷ್ಟ್ರ ನಿರ್ಮಾಣದಲ್ಲಿ ನಾಗರಿಕರ ಅಭಿವೃದ್ಧಿ ಬಹಳ ಮುಖ್ಯವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ನಾಯಕರ ಅಭಿವೃದ್ಧಿ ಬಹಳ ಮುಖ್ಯವಾಗಿರುತ್ತದೆ.ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್ (SOUL) ಸ್ಥಾಪನೆಯು ವಿಕಸಿತ ಭಾರತದ ಪ್ರಯಾಣದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.
ಕೆಲವು ಕಾರ್ಯಕ್ರಮಗಳು ಹೃದಯಕ್ಕೆ ಬಹಳ ಹತ್ತಿರವಾಗಿರುತ್ತವೆ, ಇಂದಿನ ಕಾರ್ಯಕ್ರಮವು ಅವುಗಳಲ್ಲಿ ಒಂದಾಗಿದೆ. ರಾಷ್ಟ್ರ ನಿರ್ಮಾಣಕ್ಕಾಗಿ, ಉತ್ತಮ ನಾಗರಿಕರ ಅಭಿವೃದ್ಧಿ ಅತ್ಯಗತ್ಯ. ಯಾವುದೇ ಉನ್ನತ ಸ್ಥಾನವನ್ನು ಏರಲು ಅಥವಾ ವಿಶಾಲತೆಯನ್ನು ಸಾಧಿಸಲು, ಆರಂಭದಿಂದಲೇ ಅಡಿಪಾಯ ಹಾಕಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಅಸಾಧಾರಣ ನಾಯಕರ ಅಭಿವೃದ್ಧಿ ನಿರ್ಣಾಯಕ ಮತ್ತು ಕಾಲದ ಅವಶ್ಯಕತೆಯಾಗಿದೆ. ಅದಕ್ಕಾಗಿಯೇ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್ (SOUL) ಸ್ಥಾಪನೆಯು ಭಾರತದ ಅಭಿವೃದ್ಧಿ ಹೊಂದಿದ ಭವಿಷ್ಯದ ಪ್ರಯಾಣದಲ್ಲಿ ಮಹತ್ವದ ಮತ್ತು ಪ್ರಮುಖ ಹೆಜ್ಜೆಯಾಗಿದೆ. 'SOUL' ಎಂಬ ಹೆಸರೇ ಕಾಕತಾಳೀಯವಲ್ಲ - ಈ ಸಂಸ್ಥೆಯು ಭಾರತದ ಸಾಮಾಜಿಕ ಜೀವನದ ಆತ್ಮವಾಗುತ್ತದೆ ಎಂದು ಹೇಳಿದರು.
ಜಾಗತಿಕ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿರುವ ಭಾರತ, ಪ್ರತಿಯೊಂದು ಕ್ಷೇತ್ರದಲ್ಲೂ ಆವೇಗವನ್ನು ಹೆಚ್ಚಿಸಲು ನಮಗೆ ವಿಶ್ವ ದರ್ಜೆಯ ನಾಯಕರು ಬೇಕು ಎಂದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಾಯಕತ್ವವನ್ನು ಬೆಳೆಸುವತ್ತ ಸೋಲ್ ಮಹತ್ವದ ಹೆಜ್ಜೆಯಾಗಿದೆ. ಭೂತಾನಿನ ಪ್ರಧಾನಿ ತ್ಸೆರಿಂಗ್ ಟೋಬ್ಗೆ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಟೋಬ್ಗೆ, ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದರು, ಮೋದಿಯವರನ್ನು ಹಿರಿಯ ಸೋದರ ಮತ್ತು ಮಾರ್ಗದರ್ಶಕ ಎಂದು ಬೋಧಿಸಿದರು.
ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಕ್ಕಾಗಲೆಲ್ಲಾ ನಾನು ಸಂತೋಷದಿಂದ ತುಂಬಿ ತುಳುಕುತ್ತೇನೆ. ನನ್ನ ಮಾರ್ಗದರ್ಶಕ ನೀವು. ನಿಮ್ಮನ್ನು ಭೇಟಿಯಾದಾಗಲೆಲ್ಲಾ, ಸಾರ್ವಜನಿಕ ಸೇವಕನಾಗಿ ಇನ್ನಷ್ಟು ಶ್ರಮಿಸಲು ನನಗೆ ಸ್ಫೂರ್ತಿ ಸಿಗುತ್ತದೆ ಎಂದರು.
ಸೋಲ್ ಉಪಕ್ರಮವನ್ನು ಶ್ಲಾಘಿಸಿದ ಟೋಬ್ಗೆ, ಇದು ನಿಜವಾದ ನಾಯಕರನ್ನು ಬೆಳೆಸುವಲ್ಲಿ ಮೋದಿಯವರ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಇದು ಒಂದು ಆದರ್ಶ ಅವಕಾಶ, ಇಲ್ಲಿ ನಾನು ವಿಶ್ವದ ಶ್ರೇಷ್ಠ ನಾಯಕ ಪ್ರಧಾನಿ ನರೇಂದ್ರ ಮೋದಿಯವರಿಂದ ನಾಯಕತ್ವದ ಬಗ್ಗೆ ಕಲಿಯಲಿದ್ದೇನೆ ಎಂದರು.
ಇಂದು ಮತ್ತು ನಾಳೆ ನಡೆಯುವ ಎರಡು ದಿನಗಳ ಸಮಾವೇಶವು ರಾಜಕೀಯ, ಕ್ರೀಡೆ, ಕಲೆ, ಮಾಧ್ಯಮ, ಸಾರ್ವಜನಿಕ ನೀತಿ, ವ್ಯವಹಾರ ಮತ್ತು ಸಾಮಾಜಿಕ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳ ನಾಯಕರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಇದು ಯುವ ಪ್ರೇಕ್ಷಕರಿಗೆ ಯಶಸ್ಸು ಮತ್ತು ವೈಫಲ್ಯಗಳ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸ್ಫೂರ್ತಿ ನೀಡುವುದರ ಜೊತೆಗೆ ಸಹಯೋಗ ಮತ್ತು ಚಿಂತನೆಯ ನಾಯಕತ್ವದ ಪರಿಸರ ವ್ಯವಸ್ಥೆಯನ್ನು ರಚಿಸಲು ಪ್ರಯತ್ನಿಸುತ್ತದೆ.
ಏನಿದು SOUL?
ಇದು ಗುಜರಾತ್ ನಲ್ಲಿ ತಲೆಯೆತ್ತಲಿರುವ ಸಂಸ್ಥೆಯಾಗಿದ್ದು, ಶ್ರೇಣಿ, ಬದ್ಧತೆ ಮತ್ತು ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊರತುಪಡಿಸಿ ಸಾರ್ವಜನಿಕ ಸೇವೆಯಲ್ಲಿ ಇಚ್ಛೆಯಿರುವ ಭವಿಷ್ಯದ ನಾಯಕರುಗಳಿಗೆ ತರಬೇತಿ ನೀಡುವುದಾಗಿದೆ. ಸೋಲ್ ಸಮ್ಮೇಳನದಲ್ಲಿ ರಾಜಕೀಯ, ಕ್ರೀಡೆ, ಉದ್ಯಮ, ಕಲೆ, ಮಾಧ್ಯಮ ಮತ್ತು ಸಾರ್ವಜನಿಕ ನೀತಿಯ ಕ್ಷೇತ್ರಗಳ ನಾಯಕರು ತಮ್ಮ ಒಳನೋಟ ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಗುಜರಾತ್ ರಾಜ್ಯದ ಗಾಂಧಿನಗರದಲ್ಲಿ ಸೋಲ್ ಕ್ಯಾಂಪಸ್ ನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಗಿಫ್ಟ್ ಸಿಟಿ ರಸ್ತೆಯ ಬಳಿ ಇರುವ ಗುಜರಾತ್ ಜೈವಿಕ ತಂತ್ರಜ್ಞಾನ ವಿಶ್ವ ವಿದ್ಯಾಲಯದ 22 ಎಕರೆ ಪ್ರದೇಶದಲ್ಲಿ ಹರಡಿದೆ. ಸುಮಾರು 150 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾಂಪಸ್ ಎರಡು ವರ್ಷಗಳಲ್ಲಿ ಪೂರ್ಣವಾಗುವ ನಿರೀಕ್ಷೆಯಿದೆ.
Advertisement