
ಜಾರ್ಖಂಡ್: ಮೇಕೆ ಕದ್ದಿದ್ದ ಇಬ್ಬರು ವ್ಯಕ್ತಿಗಳನ್ನು ಗುಂಪೊಂದು ಥಳಿಸಿ ಕೊಂದ ಘಟನೆ ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್‌ನಲ್ಲಿ ನಡೆದಿದೆ. ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಗುಂಪೊಂದು ಇಬ್ಬರನ್ನು ಥಳಿಸಿ ಕೊಂದಿದೆ ಎಂದು ಆರೋಪಿಸಲಾಗಿದೆ. ಇಬ್ಬರು ಮೇಕೆ ಕದಿಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ರಾತ್ರಿ ಚಾಕುಲಿಯಾ ಪೊಲೀಸ್ ಠಾಣೆ ಪ್ರದೇಶದ ಜೋಡ್ಸಾ ಗಾಂವ್ವಾದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇಕೆ ಕದಿಯುವಾಗ ಅವರಿಬ್ಬರನ್ನೂ ಅದರ ಮಾಲೀಕರು ಹಿಡಿದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಿಷರ್ಭ್ ಗರ್ಗ್ ತಿಳಿಸಿದ್ದಾರೆ. ಇದಾದ ನಂತರ, ಮಾಲೀಕರು ಹಾಗೂ ಜನರ ಗುಂಪು ಮಾರಣಾಂತಿಕವಾಗಿ ಥಳಿಸಿದ್ದು ಅವರಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೊಬ್ಬ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಸದ್ಯ ನಾವು ಮೇಕೆಯ ಮಾಲೀಕರನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಇತರ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು.
ಪೊಲೀಸರ ಪ್ರಕಾರ, ಚಾಕುಲಿಯಾದ ಜೀರಾಪಾರ ಗ್ರಾಮದ ನಿವಾಸಿಗಳಾದ ಕುಶಾಕ್ ಬೆಹೆರಾ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಭೋಲಾ ನಾಥ್ ಮಹ್ತೊ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಮೇಕೆಯನ್ನು ಕದಿಯುವಾಗ ಅದರ ಕುತ್ತಿಗೆಗೆ ಕಟ್ಟಿದ್ದ ಗಂಟೆ ಬಾರಿಸಿದೆ. ಇದರಿಂದಾಗಿ ಮನೆ ಮಾಲೀಕ ಹರ್‌ಗೋವಿಂದ್ ನಾಯಕ್ ಎಚ್ಚರಗೊಂಡರು. ನಾಯಕ್ ಮನೆಯಿಂದ ಹೊರಬಂದು ಮೇಕೆಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿದರು. ಆಗ ಇಬ್ಬರು ಯುವಕರು ಬೈಕ್‌ನಲ್ಲಿ ಮೂರು ಮೇಕೆಗಳನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿದ್ದಾರೆ. ಈ ಬಗ್ಗೆ ಮಾಲೀಕರು ಇತರ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು ಕೂಡಲೇ ಜನರು ಇಬ್ಬರನ್ನು ಹಿಡಿದಿದ್ದಾರೆ. ನಂತರ ಗುಂಪು ಅವರನ್ನು ನಿರ್ದಯವಾಗಿ ಥಳಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಬಿದಿರಿನ ಕೋಲುಗಳಿಂದ ಹೊಡೆದಿದ್ದಾರೆ. ಇದರ ಪರಿಣಾಮವಾಗಿ ಬೆಹೆರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement