
ನವದೆಹಲಿ: ಮಹಾಕುಂಭ ಮೇಳ ವೀಕ್ಷಿಸಲು ದೆಹಲಿಯಿಂದ ಪ್ರಯಾಗ್ ರಾಜ್ ಗೆ ಬಂದಿದ್ದ ದಂಪತಿ ಹೋಮ್ ಸ್ಟೇಯೊಂದರಲ್ಲಿ ತಂಗಿದ್ದರು.ಮಹಾಕುಂಭದಲ್ಲಿ ಒಟ್ಟಿಗೆ ಕಳೆದ ಕ್ಷಣಗಳ ಫೋಟೋ, ವಿಡಿಯೋಗಳನೆಲ್ಲಾ ಮನೆಯಲ್ಲಿದ್ದ ತಮ್ಮ ಮಕ್ಕಳಿಗೆ ಪತಿ ಕಳುಹಿಸಿದ್ದರು. ಆದರೆ, ಆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಪ್ರಯಾಗರಾಜ್ ಕಮಿಷನರೇಟ್ ವ್ಯಾಪ್ತಿಯ ಜುನ್ಸಿ ಪ್ರದೇಶದಲ್ಲಿ ಫೆಬ್ರವರಿ 18 ರ ರಾತ್ರಿ ಈ ಬರ್ಬರ ಹತ್ಯೆ ನಡೆದಿತ್ತು. ಆದರೆ, ಘಟನೆ ನಡೆದ 48 ಗಂಟೆಗಳಲ್ಲಿ ಪ್ರಕರಣ ಭೇದಿಸಿರುವ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ. ಮೃತ ಮಹಿಳೆಯನ್ನು ಮೀನಾಕ್ಷಿ ಎಂದು ಗುರುತಿಸಲಾಗಿದೆ. ತ್ರಿಲೋಕಪುರಿ ನಿವಾಸಿಯಾದೆ ಈಕೆ ಫೆಬ್ರವರಿ 18 ರಂದು ತನ್ನ ಪತಿ ಅಶೋಕ್ ಕುಮಾರ್ ಜೊತೆಗೆ ಪ್ರಯಾಗ್ ರಾಜ್ ಗೆ ತೆರಳಿದ್ದರು. ಹಂತಕ ಪತಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಸಂಬಂಧವೇ ಕೊಲೆಗೆ ಕಾರಣ: ವಿಚಾರಣೆ ವೇಳೆ ಅಶೋಕ್ ಕುಮಾರ್ ತಪ್ಪೊಪ್ಪಿಕೊಂಡಿದ್ದು, ಮೂರು ತಿಂಗಳಿಂದ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಪೂರ್ವ ದೆಹಲಿಯ ತ್ರಿಲೋಕಪುರಿಯಲ್ಲಿ ವಾಸವಾಗಿರುವ ಪೌರ ಕಾರ್ಮಿಕ ಅಶೋಕ್ ವಿವಾಹೇತರ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದು, ತನ್ನ ಹೆಂಡತಿಯ್ನು ಸಾಯಿಸಿ, ತನ್ನ ಅಕ್ರಮ ಸಂಬಂಧ ಮುಂದುವರಿಸಲು ತಂತ್ರ ರೂಪಿಸಿದ್ದಾಗಿ ತಿಳಿಸಿದ್ದಾನೆ.
ಅನುಮಾನ ಬಾರದಂತೆ ಸಾಕ್ಷ್ಯನಾಶ: ಫೆಬ್ರವರಿ 17 ರಂದು ಮಹಾಕುಂಭ ಯಾತ್ರೆ ನೆಪದಲ್ಲಿ ಮೀನಾಕ್ಷಿಯೊಂದಿಗೆ ದೆಹಲಿಯಿಂದ ಹೊರಟದ್ದಾನೆ. ಮರುದಿನ, ದಂಪತಿಗಳು ಜುನ್ಸಿ ತಲುಪಿದ್ದು, ರಾತ್ರಿಯಾಗುತ್ತಿದ್ದಂತೆ ಹೋಮ್ ಸ್ಟೇನಲ್ಲಿ ಉಳಿದಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಮೀನಾಕ್ಷಿ ಬಾತ್ರೂಮ್‌ಗೆ ಹೋದಾಗ, ಅಶೋಕ್ ಆಕೆಯ ಮೇಲೆ ಹಿಂದಿನಿಂದ ಹಲ್ಲೆ ನಡೆಸಿ ಚಾಕುವಿನಿಂದ ಕತ್ತು ಸೀಳಿದ್ದಾನೆ. ನಂತರ ಆತ ತನ್ನ ರಕ್ತಸಿಕ್ತ ಬಟ್ಟೆಗಳನ್ನು ಬದಲಾಯಿಸಿದ್ದು, ಅದರಲ್ಲಿ ಕೊಲೆಗೆ ಬಳಿಸಿದ್ದ ಆಯುಧವನ್ನು ಯಾರಿಗೂ ಅನುಮಾನ ಬಾರದಂತೆ ಸಾಕ್ಷ್ಯ ನಾಶಪಡಿಸಿದ್ದ. ನಂತರ ತನ್ನ ಮಗ ಆಶಿಶ್‌ಗೆ ಕರೆ ಮಾಡಿ ಮಹಾಮೇಳದಲ್ಲಿ ಮೀನಾಕ್ಷಿ ನಾಪತ್ತೆಯಾಗಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ್ದ.
ಸತ್ಯ ಹೊರಗೆ: ತನ್ನ ತಂದೆಯ ಹೇಳಿಕೆಯಿಂದ ಅನುಮಾನಗೊಂಡ ಮೀನಾಕ್ಷಿ ಮಗ ಅಶ್ವಿನ್ ಫೆಬ್ರವರಿ 20 ರಂದು ತಮ್ಮ ತಾಯಿಯ ಭಾವಚಿತ್ರದೊಂದಿಗೆ ಮಹಾಕುಂಭಕ್ಕೆ ಆಗಮಿಸಿ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾಗ ಪೊಲೀಸರು ಶವ ಪತ್ತೆಯಾದ ಪ್ರದೇಶದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಫೆಬ್ರವರಿ 18 ರಂದು ಕೊಲೆಯ ಒಂದು ದಿನದ ಮೊದಲು, ಅಶೋಕ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಮತ್ತು ಮೀನಾಕ್ಷಿಯ ವೀಡಿಯೊವನ್ನು ಅಪ್ಲೋಡ್ ಮಾಡಿದ್ದ. ಇದರಲ್ಲಿ ಅವರು ಪವಿತ್ರ ಸ್ನಾನ ಮಾಡುವುದಿತ್ತು. ಸಿಸಿಟಿವಿ ದೃಶ್ಯಾವಳಿಗಳು, ವಿಧಿ ವಿಜ್ಞಾನ ಪ್ರಯೋಗಾಲಯ ವರಿದಿಗಳು ಹಾಗೂ ಅಶೋಕ್ ನೀಡುತ್ತಿದ್ದ ಹೇಳಿಕೆಗೆ ಒಂದಕೊಂದು ತಾಳೆಯಾಗುತ್ತಿರಲಿಲ್ಲ. ಇದರಿಂದಾಗಿ ಕೊನೆಗೆ ಸತ್ಯಾಂಶ ಹೊರಗೆ ಬಂದಿದ್ದು, ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.
Advertisement