'ಡಾ. ಅಂಬೇಡ್ಕರ್ ಗಿಂತ ಪ್ರಧಾನಿ ಮೋದಿ ದೊಡ್ಡವರು ಎಂದು ಬಿಜೆಪಿ ಭಾವಿಸುತ್ತದೆಯೇ?'
ನವದೆಹಲಿ: ದೆಹಲಿ ಮುಖ್ಯಮಂತ್ರಿ ಕಚೇರಿ ಮತ್ತು ವಿಧಾನಸಭೆ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಪಕ್ಕಕ್ಕೆ ಸರಿಸಿ, ಪ್ರಮುಖ ಜಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಹಾಕುವ ಮೂಲಕ ಬಿಜೆಪಿ, ಅಂಬೇಡ್ಕರ್ ಪರಂಪರೆಯನ್ನು ಬದಿಗೆ ಸರಿಸಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ(ಎಲ್‌ಒಪಿ) ಮತ್ತು ಹಿರಿಯ ಎಎಪಿ ನಾಯಕಿ ಅತಿಶಿ ಅವರು ಮಂಗಳವಾರ ಆರೋಪಿಸಿದ್ದಾರೆ.
ಬಿಜೆಪಿ ಮೋದಿಯನ್ನು ಅಂಬೇಡ್ಕರ್ ಗಿಂತ "ಶ್ರೇಷ್ಠ" ಎಂದು ಪರಿಗಣಿಸುತ್ತದೆಯೇ? ಎಂದು ಪ್ರಶ್ನಿಸಿದ ಅತಿಶಿ, ಅಂಬೇಡ್ಕರ್ ಹೆಸರಿನಲ್ಲಿ ಘೋಷಣೆ ಕೂಗಿದ್ದಕ್ಕಾಗಿ ಎಎಪಿ ಶಾಸಕರನ್ನು ಅಮಾನತುಗೊಳಿಸಲಾಗಿದೆ. ಆದರೆ ಮೋದಿ ಹೆಸರನ್ನು ಜಪಿಸಿದ ಬಿಜೆಪಿ ಶಾಸಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಟೀಕಿಸಿದರು.
ವಿಧಾನಸಭೆಯಿಂದ ಅಮಾನತುಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅತಿಶಿ, "ಬಿಜೆಪಿ ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರದೊಂದಿಗೆ ಬದಲಾಯಿಸಿದೆ... ಬಿಜೆಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಗಿಂತ ಪ್ರಧಾನಿ ಮೋದಿ ದೊಡ್ಡವರು ಎಂದು ಭಾವಿಸುತ್ತದೆಯೇ? ಎಂದು ಪ್ರಶ್ನಿಸಿದರು.
ಎಎಪಿ ಶಾಸಕರು ಡಾ. ಅಂಬೇಡ್ಕರ್ ಅವರನ್ನು ಬೆಂಬಲಿಸಿ ಘೋಷಣೆ ಕೂಗಿದ್ದಕ್ಕೆ ಅವರನ್ನು ಅಮಾನತುಗೊಳಿಸಲಾಯಿತು. ಆದರೆ ಬಿಜೆಪಿ ಶಾಸಕರು ಪ್ರಧಾನಿ ಮೋದಿ ಪರ ಘೋಷಣೆಗಳನ್ನು ಕೂಗಿದಾಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರರ್ಥ ಬಿಜೆಪಿ ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರನ್ನು ದ್ವೇಷಿಸುತ್ತದೆ..." ಎಂದರು.
"ಬಿಜೆಪಿ, ದೆಹಲಿ ಸಚಿವಾಲಯ ಮತ್ತು ವಿಧಾನಸಭೆಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಹಾಗೂ ದೆಹಲಿ ಸಚಿವಾಲಯದಲ್ಲಿರುವ ಎಲ್ಲಾ ಸಚಿವರ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋದೊಂದಿಗೆ ಬದಲಾಯಿಸಿದೆ ಎಂದರು.
ಒಂದು ಕಾಲದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಹಾಕಲಾಗಿದ್ದ ಸ್ಥಳದಲ್ಲಿ ಈಗ ನರೇಂದ್ರ ಮೋದಿ ಅವರ ಫೋಟೋ ಹಾಕಲಾಗಿದೆ ಎಂದು ಅತಿಶಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ