AAP chief Arvind Kejriwal (L), Rajya Sabha member Sanjiv Arora
ಅರವಿಂದ್ ಕೇಜ್ರಿವಾಲ್ ಮತ್ತು ಸಂಜೀವ್ ಅರೋರ (ಸಂಗ್ರಹ ಚಿತ್ರ )

ಪಂಜಾಬ್ ಮೂಲಕ ರಾಜ್ಯಸಭೆ ಪ್ರವೇಶಕ್ಕೆ ಕೇಜ್ರಿವಾಲ್ ಒಲವು?: ವದಂತಿ ಮಧ್ಯೆ ಲುಧಿಯಾನ ಪಶ್ಚಿಮ ಉ.ಚುನಾವಣೆ ಅಭ್ಯರ್ಥಿಯಾಗಿ ಸಂಜೀವ್ ಅರೋರ ಆಯ್ಕೆ

ಕಳೆದ ತಿಂಗಳು ಎಎಪಿ ಶಾಸಕ ಗುರುಪ್ರೀತ್ ಬಸ್ಸಿ ಗೋಗಿ ಅವರ ನಿಧನದ ನಂತರ ಲುಧಿಯಾನ ಪಶ್ಚಿಮ ಸ್ಥಾನ ಖಾಲಿಯಾಗಿದೆ. ಗೋಗಿ ಅವರ ಮನೆಯಲ್ಲಿದ್ದ ಪರವಾನಗಿ ಪಡೆದ ಬಂದೂಕು ಆಕಸ್ಮಿಕವಾಗಿ ಸಿಡಿದ ಗುಂಡೇಟಿನಿಂದ ಗಾಯಗೊಂಡು ತಮ್ಮ ಮನೆಯಲ್ಲಿ ನಿಧನರಾಗಿದ್ದರು.
Published on

ಚಂಡೀಗಢ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿರುವ ಏಕೈಕ ರಾಜ್ಯ ಪಂಜಾಬ್‌ನಿಂದ ರಾಜ್ಯಸಭಾ ಹುದ್ದೆಗೆ ಪ್ರವೇಶ ಪಡೆಯುವ ಇಚ್ಛೆಯಲ್ಲಿದ್ದಾರೆಯೇ ಎಂಬ ಗುಮಾನಿ ಎದ್ದಿದೆ. ಪಂಜಾಬ್ ನ ಲುಧಿಯಾನ (ಪಶ್ಚಿಮ) ವಿಧಾನಸಭಾ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ರಾಜ್ಯಸಭಾ ಸಂಸದ ಸಂಜೀವ್ ಅರೋರಾ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು ಈ ಊಹಾಪೋಹಗಳಿಗೆ ಪುಷ್ಠಿ ನೀಡಿದೆ.

ಈ ಘೋಷಣೆಯನ್ನು ಎಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಉಪಚುನಾವಣೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಲುಧಿಯಾನ ಮೂಲದ ಕೈಗಾರಿಕೋದ್ಯಮಿ ಅರೋರಾ ಅವರು 2022 ರಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಕಳೆದ ತಿಂಗಳು ಎಎಪಿ ಶಾಸಕ ಗುರುಪ್ರೀತ್ ಬಸ್ಸಿ ಗೋಗಿ ಅವರ ನಿಧನದ ನಂತರ ಲುಧಿಯಾನ ಪಶ್ಚಿಮ ಸ್ಥಾನ ಖಾಲಿಯಾಗಿದೆ. ಗೋಗಿ ಅವರ ಮನೆಯಲ್ಲಿದ್ದ ಪರವಾನಗಿ ಪಡೆದ ಬಂದೂಕು ಆಕಸ್ಮಿಕವಾಗಿ ಸಿಡಿದ ಗುಂಡೇಟಿನಿಂದ ಗಾಯಗೊಂಡು ತಮ್ಮ ಮನೆಯಲ್ಲಿ ನಿಧನರಾಗಿದ್ದರು.

ತಮ್ಮನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿರುವ ಅರೋರಾ, ಪಕ್ಷದ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಉಪ ಚುನಾವಣೆಯಲ್ಲಿ ಅರೋರಾ ಅವರು ಗೆದ್ದರೆ, ಅವರು ತಮ್ಮ ರಾಜ್ಯಸಭಾ ಸ್ಥಾನವನ್ನು ಖಾಲಿ ಮಾಡಬೇಕಾಗುತ್ತದೆ. ಅವರನ್ನು ಭಗವಂತ್ ಮಾನ್ ಸಂಪುಟಕ್ಕೆ ಸಚಿವರನ್ನಾಗಿ ಸೇರಿಸಿಕೊಳ್ಳಬಹುದು. ಆಗ ಮೇಲ್ಮನೆಯಲ್ಲಿನ ಸಂಭಾವ್ಯ ಖಾಲಿ ಹುದ್ದೆಗೆ ಅರವಿಂದ್ ಕೇಜ್ರಿವಾಲ್ ಅವರನ್ನು ಬದಲಾಯಿಸುವ ಸಾಧ್ಯತೆ ಇದೆ ಎಂಬ ವದಂತಿಗಳು ದಟ್ಟವಾಗಿ ಕೇಳಿಬರುತ್ತಿದೆ.

ಆದರೆ ಸಂಜೀವ್ ಅರೋರಾ ಅವರು ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ನಂತರವಷ್ಟೇ ಇದು ತೀರ್ಮಾನವಾಗಲಿದೆ. ಮೂಲಗಳ ಪ್ರಕಾರ, ಪಂಜಾಬ್‌ನ ಇತರ ಮೇಲ್ಮನೆ ಸಂಸದರು ಸಹ ಕೇಜ್ರಿವಾಲ್ ಅವರನ್ನು ಬೆಂಬಲಿಸಲು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿ ಚುನಾವಣೆಯಲ್ಲಿ ಎಎಪಿ ಸೋತು ಕೇಜ್ರಿವಾಲ್ ತಮ್ಮ ದೆಹಲಿ ಸ್ಥಾನವನ್ನು ಕಳೆದುಕೊಂಡ ನಂತರ ಮತ್ತು ಪಕ್ಷವು 70 ಸದಸ್ಯರ ವಿಧಾನಸಭೆಯಲ್ಲಿ ಈ ಬಾರಿ ಕೇವಲ 22 ಸ್ಥಾನಗಳನ್ನು ಗಳಿಸಿದ ನಂತರ ಎರಡು ಆಯ್ಕೆಗಳನ್ನು ಅರವಿಂದ್ ಕೇಜ್ರಿವಾಲ್ ಅನ್ವೇಷಿಸುತ್ತಿದ್ದಾರೆ: ಪಂಜಾಬ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಅಥವಾ ತಮ್ಮ ರಾಷ್ಟ್ರೀಯ ಪ್ರಸ್ತುತತೆಯನ್ನು ಕಾಪಾಡಿಕೊಳ್ಳಲು ರಾಜ್ಯಸಭಾ ಸ್ಥಾನವನ್ನು ಪಡೆದುಕೊಳ್ಳುವುದು.

ಭಗವಂತ್ ಮಾನ್ ಅವರನ್ನು ಬದಲಿಸುವುದರಿಂದ ಪಕ್ಷದ ಸ್ಥಿರತೆಗಿಂತ ಅವರು ತಮ್ಮ ಮಹತ್ವಾಕಾಂಕ್ಷೆಗಳಿಗೆ ಆದ್ಯತೆ ನೀಡುತ್ತಾರೆ ಎಂಬ ಆರೋಪಗಳು ಬರಬಹುದು. ರಾಜ್ಯಸಭೆಯ ಸ್ಥಾನವು ಅವರಿಗೆ ಬಲವಾದ ರಾಷ್ಟ್ರೀಯ ಉಪಸ್ಥಿತಿಯನ್ನು ಕಾಯ್ದುಕೊಳ್ಳಲು ಅವಕಾಶ ನೀಡಬಹುದು.

ಆಮ್ ಆದ್ಮಿ ಪಕ್ಷವು ಪ್ರಸ್ತುತ 10 ರಾಜ್ಯಸಭೆ ಸ್ಥಾನಗಳನ್ನು ಹೊಂದಿದೆ, ಅವುಗಳಲ್ಲಿ ದೆಹಲಿಯಿಂದ ಮೂರು ಮತ್ತು ಪಂಜಾಬ್‌ನಿಂದ ಏಳು ಸ್ಥಾನಗಳಿವೆ. ದೆಹಲಿ ಸ್ಥಾನಗಳು 2030 ರವರೆಗೆ ಸುರಕ್ಷಿತವಾಗಿದ್ದರೂ, ಪಂಜಾಬ್‌ನ ರಾಜ್ಯಸಭೆಯ ಸ್ಥಾನಗಳು 2028 ರವರೆಗೆ ಮಾನ್ಯವಾಗಿರುತ್ತವೆ, ಇದು ಮೇಲ್ಮನೆಗೆ ಅತ್ಯಂತ ಕಾರ್ಯಸಾಧ್ಯವಾದ ಮಾರ್ಗವಾಗಿದೆ.

ಊಹಾಪೋಹ ತಳ್ಳಿಹಾಕಿದ ಆಪ್

ಆದರೆ ಆಮ್ ಆದ್ಮಿ ಪಕ್ಷ ಈ ಊಹಾಪೋಹವನ್ನು ತಳ್ಳಿಹಾಕಿದೆ. ಅರವಿಂದ್ ಕೇಜ್ರಿವಾಲ್ ರಾಜ್ಯಸಭೆಗೆ ಹೋಗುತ್ತಿಲ್ಲ. ಅವರು ಪಂಜಾಬ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಮಾಧ್ಯಮಗಳಲ್ಲಿ ಆರಂಭದಲ್ಲಿ ಸುದ್ದಿಯಾಯಿತು. ನಂತರ ಈಗ ಅವರು ರಾಜ್ಯಸಭೆಗೆ ಸ್ಪರ್ಧಿಸುತ್ತಾರೆ ಎಂದು ಮಾಧ್ಯಮಗಳು ಹೇಳುತ್ತವೆ. ಈ ಎರಡೂ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಎಎಪಿ ವಕ್ತಾರ ಪ್ರಿಯಾಂಕಾ ಕಕ್ಕರ್ ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ಎಎಪಿಯ ರಾಷ್ಟ್ರೀಯ ಸಂಚಾಲಕರು. ಅವರ ಕಾರ್ಯವ್ಯಾಪ್ತಿ ದೊಡ್ಡದಿದ್ದು, ಒಂದು ಸ್ಥಾನಕ್ಕೆ ಸೀಮಿತ ವ್ಯಕ್ತಿ ಅವರಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com