
ನವದೆಹಲಿ: ದೆಹಲಿಯ ಸೆಲೆಕ್ಟ್ ಸಿಟಿ ಮಾಲ್‌ನಲ್ಲಿರುವ ಸಿನಿಮಾ ಮಂದಿರದಲ್ಲಿ ಬುಧವಾರ ಬಾಲಿವುಡ್ ಸಿನಿಮಾ 'ಛಾವಾ' ಪ್ರದರ್ಶನದ ವೇಳೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಸಂಜೆ 4:15 ಕ್ಕೆ 'ಛಾವಾ' ಸಿನಿಮಾ ಪ್ರದರ್ಶನದ ವೇಳೆ ಮಾಲ್‌ನಲ್ಲಿರುವ ಪಿವಿಆರ್ ಸಿನಿಮಾಸ್‌ನ ಸಿನಿಮಾ ಪರದೆಯ ಒಂದು ಮೂಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರು ಭಯಭೀತರಾಗಿ ಹೊರಗೆ ಹೋದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಸಂಜೆ 5.42 ಕ್ಕೆ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ನಮಗೆ ಕರೆ ಬಂದಿತ್ತು ಮತ್ತು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಭಾಂಗಣದಲ್ಲಿ ಬೆಂಕಿಯ ಎಚ್ಚರಿಕೆ ಮೊಳಗಲು ಪ್ರಾರಂಭಿಸಿದಾಗ, ಎಲ್ಲರೂ ನಿರ್ಗಮನ ದ್ವಾರಗಳಿಗೆ ಧಾವಿಸಿದರು ಮತ್ತು ತಕ್ಷಣ ಸಿನಿಮಾ ಮಂದಿರವನ್ನು ಖಾಲಿ ಮಾಡಲಾಯಿತು ಎಂದು ಮತ್ತೊಬ್ಬ ಸಿನಿಮಾ ಮಂದಿರದ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಅಭಿನಯದ ಐತಿಹಾಸಿಕ ಆ್ಯಕ್ಷನ್ ಚಿತ್ರ 'ಛಾವಾ' ಯಶಸ್ವಿ ಪ್ರದರ್ಶನ ಕಾಣುತ್ತಿದ್ದು. ಬಿಡುಗಡೆಯಾದ ಮೊದಲ ದಿನವೇ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ಗಳಿಸಿದೆ.
Advertisement