
ಅಹಮದಾಬಾದ್: ಮಹಿಳಾ ರೋಗಿಗಳ ವಿಡಿಯೋಗಳನ್ನು ಪಡೆಯಲು ಆಸ್ಪತ್ರೆಯ ಸಿಸಿಟಿವಿ ನೆಟ್‌ವರ್ಕ್ ಅನ್ನು ಹ್ಯಾಕ್ ಮಾಡಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮಹಿಳಾ ರೋಗಿಗಳ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದಕ್ಕಾಗಿ ಸಿಸಿಟಿವಿ ಹ್ಯಾಕ್ ಮಾಡಿದ ಆರೋಪದ ಮೇಲೆ ದೆಹಲಿ ನಿವಾಸಿ ರೋಹಿತ್ ಸಿಸೋಡಿಯಾನನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ.
ಸಿಸೋಡಿಯಾ ಹ್ಯಾಕ್ ಮಾಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಕ್ಯೂಆರ್ ಕೋಡ್‌ಗಳಾಗಿ ಪರಿವರ್ತಿಸಿ, ಅವುಗಳನ್ನು ಯೂಟ್ಯೂಬ್ ಮತ್ತು ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಸಹ-ಆರೋಪಿಗಳಿಗೆ ಮಾರಾಟ ಮಾಡಿದ್ದಾನೆ ಎಂದು ಅಹಮದಾಬಾದ್ ಸೈಬರ್ ಕ್ರೈಮ್ ಬ್ರಾಂಚ್ ಪ್ರಕಟಣೆಯಲ್ಲಿ ತಿಳಿಸಿದೆ.
ಆಸ್ಪತ್ರೆಯ ಹೆರಿಗೆ ಕೋಣೆಯೊಳಗೆ ವೈದ್ಯರು ಮಹಿಳಾ ರೋಗಿಗಳನ್ನು ಪರೀಕ್ಷಿಸುತ್ತಿರುವ ವಿಡಿಯೋಗಳನ್ನು ಕೆಲವು ಯೂಟ್ಯೂಬ್ ಮತ್ತು ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಿರುವುದು ಕಂಡುಬಂದ ನಂತರ ಸೈಬರ್ ಕ್ರೈಮ್ ಬ್ರಾಂಚ್ ಫೆಬ್ರವರಿ 17 ರಂದು ಪ್ರಕರಣ ದಾಖಲಿಸಿದೆ.
ಸೂರತ್‌ನ ಪರಿತ್ ಧಮೇಲಿಯಾ ಎಂಬ ಹ್ಯಾಕರ್ ಮತ್ತು ಮಹಾರಾಷ್ಟ್ರದ ಲಾತೂರ್ ನಿವಾಸಿ ಯೂಟ್ಯೂಬ್ ಚಾನೆಲ್‌ನ ಮಾಲೀಕ ಪ್ರಜ್ವಲ್ ತೇಲಿ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ವಾಣಿಜ್ಯ ಪದವೀಧರನಾದ ಧಮೇಲಿಯಾ, ರಾಜ್‌ಕೋಟ್‌ನಲ್ಲಿರುವ ಹೆರಿಗೆ ಆಸ್ಪತ್ರೆಯ ಸಿಸಿಟಿವಿ ವ್ಯವಸ್ಥೆಯನ್ನು ಹ್ಯಾಕ್ ಮಾಡಿ ಸಿಸೋಡಿಯಾ ಜೊತೆ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
Advertisement