
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ತಮ್ಮ ಸಂಪುಟ ವಿಸ್ತರಣೆ ಮಾಡಿದ್ದು, ಮೈತ್ರಿಕೂಟದ ಪಾಲುದಾರ ಪಕ್ಷ ಬಿಜೆಪಿಯ ಏಳು ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ ಭಾಗಲ್ಪುರಕ್ಕೆ ಭೇಟಿ ನೀಡಿದ ಮೂರು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಇಂದು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿಯ ಏಳು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಹಾರ ವಿಧಾನಸಭೆಯ ಸ್ಪೀಕರ್ ನಂದ ಕಿಶೋರ್ ಯಾದವ್, ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಹಾಗೂ ನಿತೀಶ್ ಕುಮಾರ್ ಸಂಪುಟದ ಇತರ ಸಚಿವರ ಸಮ್ಮುಖದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ನೂತನ ಸಚಿವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಬಹುನಿರೀಕ್ಷಿತ ಸಂಪುಟ ವಿಸ್ತರಣೆಯಲ್ಲಿ ಸಂಜಯ್ ಸಾಗೋಗಿ(ದರ್ಭಂಗಾ ಪಟ್ಟಣ), ಜಿಬೇಶ್ ಮಿಶ್ರಾ(ಜೇಲ್), ಡಾ. ಸುನಿಲ್ ಕುಮಾರ್(ಬಿಹಾರ ಷರೀಫ್), ರಾಜು ಕುಮಾರ್ ಸಿಂಗ್(ಸಾಹೇಬ್‌ಗಂಜ್), ಕೃಷ್ಣ ಕುಮಾರ್ ಮಂಟು (ಅಮ್ನೂರ್), ಮೋತಿಲಾಲ್ ಪ್ರಸಾದ್(ರಿಗಾ) ಮತ್ತು ವಿಜಯ್ ಮಂಡಲ್(ಸಿಕ್ತಿ) ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ವಿಸ್ತರಣೆ ಮಹತ್ವ ಪಡೆದುಕೊಂಡಿತು. ಸಂಪುಟ ವಿಸ್ತರಣೆಗೆ ಕೆಲವೇ ಗಂಟೆಗಳ ಮೊದಲು, ಕಂದಾಯ ಮತ್ತು ಭೂಸುಧಾರಣಾ ಇಲಾಖೆ ಸಚಿವ ದಿಲೀಪ್ ಜೈಸ್ವಾಲ್ ಅವರು ಪಕ್ಷದ ಕೇಂದ್ರ ನಾಯಕತ್ವದ ನಿರ್ದೇಶನದ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Advertisement