
ಚಂಡೀಗಢ: ಕೃಷಿ ಮಾರುಕಟ್ಟೆಯ ರಾಷ್ಟ್ರೀಯ ನೀತಿ ಚೌಕಟ್ಟಿನ ಹೊಸದಾಗಿ ಘೋಷಿಸಲಾದ ಕರಡು ಪ್ರತಿಯನ್ನು ಉಲ್ಲೇಖಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಈಗ ರದ್ದುಗೊಳಿಸಿರುವ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಹೊಸದಾಗಿ ಘೋಷಿಸಲಾದ ಕರಡು ನೀತಿಯನ್ನು 2020 ರಲ್ಲಿ ಅಂಗೀಕರಿಸಿದ ಮೂರು ಕೇಂದ್ರೀಯ ಕೃಷಿ ಕಾನೂನುಗಳನ್ನು "ಹಿಂಬಾಗಿಲಿನ ಮೂಲಕ" ಮರುಪರಿಚಯಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಎಎಪಿ ನೇತೃತ್ವದ ಪಂಜಾಬ್ ಸರ್ಕಾರ ಟೀಕಿಸಿದೆ.
ರೈತರ ಸುಮಾರು ಒಂದು ವರ್ಷದ ಪ್ರತಿಭಟನೆಯ ನಂತರ, ಕೇಂದ್ರವು ಕಾನೂನನ್ನು ರದ್ದುಗೊಳಿಸಿತು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾನ್, ಪ್ರತಿಭಟನಾ ನಿರತ ರೈತರ ಬೇಡಿಕೆಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿವೆ, ಅದು ರೈತರೊಂದಿಗೆ ಸಂವಾದ ನಡೆಸಬೇಕು ಎಂದು ಹೇಳಿದರು.
ಶಂಭು ಮತ್ತು ಖಾನೌರಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಅಥವಾ ಇತರ ರೈತ ಸಂಘಗಳಿಂದ ಬಂದ ಎಲ್ಲಾ ಬೇಡಿಕೆಗಳು ಕೇಂದ್ರಕ್ಕೆ ಸಂಬಂಧಿಸಿವೆ. ರೈತ ಸಂಘಗಳು ಭಿನ್ನಾಭಿಪ್ರಾಯ ಹೊಂದಿದ್ದರೂ ಬೇಡಿಕೆಗಳು ಒಂದೇ ಆಗಿರುತ್ತವೆ. ಕೇಂದ್ರವು ರೈತರನ್ನು ಮಾತುಕತೆಗೆ ಏಕೆ ಆಹ್ವಾನಿಸುವುದಿಲ್ಲ ಎಂದರು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಬ್ಯಾನರ್‌ನಡಿಯಲ್ಲಿ ರೈತರು ದೆಹಲಿಗೆ ಅವರ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನು ಖಾತ್ರಿ ನೀಡಬೇಕು ಎಂಬ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್ ಸರ್ಕಾರವು ಈ ಹಿಂದೆ ಕೇಂದ್ರವು ರೈತರೊಂದಿಗೆ ಮಾತುಕತೆ ನಡೆಸಲು ಹಲವಾರು ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದ್ದಾರೆ.
ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಉಪವಾಸ ಸತ್ಯಾಗ್ರಹದ ಕುರಿತು ಮಾತನಾಡಿದ ಅವರು, ದಲ್ಲೆವಾಲ್ ಉಪವಾಸ 38 ನೇ ದಿನಕ್ಕೆ ಕಾಲಿಟ್ಟಿದೆ, ಆದರೆ ಕೇಂದ್ರ ಸರ್ಕಾರಕ್ಕೆ ಆ ಬಗ್ಗೆ ಚಿಂತೆಯೇ ಇಲ್ಲ. ದಲ್ಲೆವಾಲ್ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಪಂಜಾಬ್ ಸರ್ಕಾರದ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಾವು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇವೆ. ದಲ್ಲೆವಾಲ್ ಅವರ ಧರಣಿ ನಡೆಯುತ್ತಿರುವ ಖಾನೌರಿಯಲ್ಲಿ ಐವತ್ತು ವೈದ್ಯರು ಕರ್ತವ್ಯದಲ್ಲಿದ್ದಾರೆ. ಕೇವಲ 500 ಮೀಟರ್ ದೂರದಲ್ಲಿ ನಾವು ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಿದ್ದೇವೆ ಎಂದು ಹೇಳಿದರು.
ದಲ್ಲೆವಾಲ್ ಯಾವುದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಾನು ಮಂಗಳವಾರ ದಲ್ಲೆವಾಲ್ ಅವರೊಂದಿಗೆ ಮಾತನಾಡಿದ್ದೇನೆ. ಅವರ ಆರೋಗ್ಯ ನಮಗೆಲ್ಲರಿಗೂ ಮುಖ್ಯವಾಗಿದೆ ಎಂದರು.
Advertisement