
ಲೂಮ್‌ನ ಭಾರತೀಯ ಮೂಲದ ಸಹ-ಸಂಸ್ಥಾಪಕ ವಿನಯ್ ಹಿರೇಮಠ್ ಅವರು ತಮ್ಮ ಕಂಪನಿಯನ್ನು 2023ರಲ್ಲಿ 975 ಮಿಲಿಯನ್ ಡಾಲರ್ (ಭಾರತೀಯ ರೂಪಾಯಿ 8,368 ಕೋಟಿ )ಗೆ ಅಟ್ಲಾಸಿಯನ್ ಕಂಪನಿಗೆ ಮಾರಾಟ ಮಾಡಿದ್ದು ಅಪಾರ ಸಂಪತ್ತನ್ನು ಸಂಗ್ರಹಿಸಿದ ನಂತರ ಹಿರೇಮಠ್ ಅನುಭವಿಸಿದ ಅಭದ್ರತೆಯ ಬಗ್ಗೆ ಇತ್ತೀಚೆಗೆ ಬರೆದುಕೊಂಡಿದ್ದಾರೆ.
"ನಾನು ಶ್ರೀಮಂತನಾಗಿದ್ದೇನೆ ಮತ್ತು ನನ್ನ ಜೀವನದಲ್ಲಿ ನಾನು ಏನು ಮಾಡಬೇಕೆಂದು ನನಗೆ ತಿಳಿದಿಲ್ಲ" ಎಂಬ ಶೀರ್ಷಿಕೆಯಲ್ಲಿ ವಿನಯ್ ಹಿರೇಮಠ್ ಬ್ಲಾಗ್ ಪೋಸ್ಟ್ ಮಾಡಿದ್ದಾರೆ. ತಮ್ಮ ಕಂಪನಿಯನ್ನು ಮಾರಾಟ ಮಾಡಿದ ನಂತರ ಮತ್ತೇನು ಮಾಡಬೇಕು ಎಂಬ ಹುಡುಕಾಟದಲ್ಲಿ ತೊಡಗಿರುವುದಾಗಿ ಬರೆದುಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ನನ್ನ ಜೀವನವು ಏರಿಳಿತಗಳಿಂದ ತುಂಬಿದೆ. ನನ್ನ ಕಂಪನಿಯನ್ನು ಮಾರಾಟ ಮಾಡಿದ ನಂತರ, ನಾನು ಸಂಪೂರ್ಣವಾಗಿ ಸಂಬಂಧವಿಲ್ಲದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದೇನೆ. ಅಲ್ಲಿ ನಾನು ಮತ್ತೆ ಕೆಲಸ ಮಾಡಬೇಕಾಗಿಲ್ಲ. ನಾನು ಹಣ ಸಂಪಾದಿಸಲು ಅಥವಾ ಖ್ಯಾತಿಯನ್ನು ಸಾಧಿಸಲು ಪ್ರೇರೇಪಿಸುವ ಯಾವುದೇ ಮೂಲಗಳನ್ನು ಹುಡುಕಬೇಕಿಲ್ಲ. ಅಪರಿಮಿತ ಸ್ವಾತಂತ್ರ್ಯವಿದ್ದರೂ ಅದನ್ನು ಬಳಸಿಕೊಳ್ಳುವ ಬಗ್ಗೆ ಅನಿಶ್ಚಿತತೆ ಕಾಡುತ್ತಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಜೀವನದ ಬಗ್ಗೆ ಹೆಚ್ಚು ಆಶಾವಾದಿಯಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.
ಮತ್ತೊಂದೆಡೆ ಎರಡು ವರ್ಷ ನನ್ನ ಗೆಳತಿ ಜೊತೆ ಪ್ರೀತಿಯಲ್ಲಿದ್ದೆ. ಆದರೆ ಬ್ರೇಕ್ಅಪ್ ತೀವ್ರ ನೋವು ತಂದಿದೆ. ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ ಅನ್ನೋದು ನನ್ನ ನಿಲುವು. ಪ್ರೀತಿಪೂರ್ವಕ ನಮನ ಹಾಗೂ ಧನ್ಯವಾದ. ಒಳ್ಳೆಯ ಗೆಳೆಯನಾಗಿ ಇರಲು ಸಾಧ್ಯವಾಗಲಿಲ್ಲ. ಸಮಯ ಕೊಡಲು ಸಾಧ್ಯವಾಗಲಿಲ್ಲ. ಈ ಪೋಸ್ಟ್ ಅನ್ನು ಆಕೆ ಓದುತ್ತಿದ್ದರೆ, ಅದಕ್ಕಾಗಿ ಕ್ಷಮೆ ಇರಲಿ ಎಂದು ವಿನಯ್ ಹೀರೆಮಠ್ ಬರೆದುಕೊಂಡಿದ್ದಾರೆ.
ಲೂಮ್ ಸಹ-ಸಂಸ್ಥಾಪಕ ಅವರು ಲೂಮ್ ಅನ್ನು ಸ್ವಾಧೀನಪಡಿಸಿಕೊಂಡ ಕಂಪನಿಯಲ್ಲಿ ಉಳಿಯಲು ಹೇಗೆ ಹೋರಾಡಿದರು ಎಂಬುದನ್ನು ವಿವರಿಸಿದರು. ಅಲ್ಲಿ ಅವರಿಗೆ CTO ರೂಪದಲ್ಲಿ ಸಂಭಾವ್ಯ 60 ಮಿಲಿಯನ್ ಡಾಲರ್ ಪ್ಯಾಕೇಜ್ ನೀಡಲಾಯಿತು. ಆದರೆ ಎಲ್ಲವನ್ನೂ ನಿರಾಕರಿಸಿದ ವಿನಯ್ ಹೀರೆಮಠ್ ಹೊಸ ಉದ್ಯಮ ಆರಂಭಿಸುವ ತಯಾರಿಯಲ್ಲಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಹಿರೇಮಠ್ ಇದೀಗ ಹೂಡಿಕೆದಾರರು ಮತ್ತು ರೊಬೊಟಿಕ್ಸ್ ತಜ್ಞರನ್ನು ಭೇಟಿಯಾಗುವುದು ಸೇರಿದಂತೆ ಇತರ ಉದ್ಯಮಗಳನ್ನು ಪರಿಶೋಧಿಸುತ್ತಿದ್ದಾರೆ. ಮತ್ತೊಂದೆಡೆ ಯಾವುದೇ ಪೂರ್ವ ಅನುಭವವಿಲ್ಲದೆ ಹಿಮಾಲಯಕ್ಕೆ ಚಾರಣವನ್ನು ಪ್ರಾರಂಭಿಸಿದ್ದು ಅನಾರೋಗ್ಯಕ್ಕೆ ತುತ್ತಾದರು. ಒಲ್ಲದ ಮನಸ್ಸಿನಿಂದ ಚಾರಣವನ್ನು ನಿಲ್ಲಿಸಬೇಕಾಯಿತು. ಇದೀಗ ಅವರು ಹಿರೇಮಠ್ ಚೇತರಿಸಿಕೊಂಡಿದ್ದು ಅವರ ಸ್ನೇಹಿತರು DOGE ನಲ್ಲಿ ಎಲೋನ್ ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಅವರನ್ನು ಸಂಪರ್ಕಿಸಲು ಪ್ರೋತ್ಸಾಹಿಸಿದ್ದರು. ನಂತರ ಅದು ನನಗೆ ಸರಿಹೊಂದುವುದಿಲ್ಲ ಎಂದು ತಿಳಿದುಕೊಂಡೇ ಎಂದು ಬರೆದುಕೊಂಡಿದ್ದಾರೆ.
Advertisement