
ಜಮ್ಮು: ಇಂಡಿಯಾ ಮೈತ್ರಿಕೂಟಕ್ಕೆ ಯಾವುದೇ ಸಮಯದ ಮಿತಿಯನ್ನು ನಿಗದಿಪಡಿಸಲಾಗಿಲ್ಲ ಎಂದು ಪ್ರತಿಪಾದಿಸಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಅದರ ನಾಯಕತ್ವ ಮತ್ತು ಕಾರ್ಯಸೂಚಿಯ ಬಗ್ಗೆ ಸ್ಪಷ್ಟತೆಯ ಕೊರತೆಯ ಬಗ್ಗೆ ಗುರುವಾರ ಬೇಸರ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಮೈತ್ರಿಕೂಟವು ಕೇವಲ ಸಂಸತ್ ಚುನಾವಣೆಗೆ ಮಾತ್ರ ರಚಿಸಲಾಗಿದ್ದರೆ ಅದನ್ನು ವಿಸರ್ಜಿಸುವುದು ಉತ್ತಮ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ(ಎಎಪಿ), ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ವಿರುದ್ಧ ಪರಿಣಾಮಕಾರಿಯಾಗಿ ಹೇಗೆ ಸ್ಪರ್ಧಿಸಬೇಕೆಂದು ನಿರ್ಧರಿಸುತ್ತವೆ ಎಂದು ಅಬ್ದುಲ್ಲಾ ತಿಳಿಸಿದ್ದಾರೆ.
"ದೆಹಲಿ ವಿಧಾನಸಭಾ ಚುನಾವಣೆಯ ನಂತರ, ಅವರು ಎಲ್ಲಾ ಮೈತ್ರಿಕೂಟದ ಸದಸ್ಯರನ್ನು ಸಭೆಗೆ ಕರೆಯಬೇಕು. ಈ ಮೈತ್ರಿಕೂಟವು ಸಂಸತ್ತಿನ ಚುನಾವಣೆಗೆ ಮಾತ್ರವಾಗಿದ್ದರೆ, ಅದನ್ನು ವಿಸರ್ಜಿಸಬೇಕು ಮತ್ತು ನಾವು ಪ್ರತ್ಯೇಕವಾಗಿ ಕೆಲಸ ಮಾಡುತ್ತೇವೆ. ಆದರೆ ಅದು ವಿಧಾನಸಭಾ ಚುನಾವಣೆಗೂ ಬೇಕಿದ್ದರೆ, ನಾವು ಒಟ್ಟಿಗೆ ಕುಳಿತು ಸಾಮೂಹಿಕವಾಗಿ ಕೆಲಸ ಮಾಡಬೇಕಾಗುತ್ತದೆ" ಎಂದು ಅಬ್ದುಲ್ಲಾ ಸುದ್ದಿಗಾರರಿಗೆ ತಿಳಿಸಿದರು.
ಇಂಡಿಯಾ ಬಣವು ಲೋಕಸಭಾ ಚುನಾವಣೆಗೆ ಮಾತ್ರ ಎಂಬ ಆರ್‌ಜೆಡಿ ನಾಯಕರ ಹೇಳಿಕೆಯ ಕುರಿತಾದ ಪ್ರಶ್ನೆಗೆ ಜಮ್ಮು ಮತ್ತು ಕಾಶ್ಮೀರ ಸಿಎಂ ಈ ರೀತಿ ಉತ್ತರಿಸಿದ್ದಾರೆ.
"ನನಗೆ ನೆನಪಿರುವಂತೆ, ಇದಕ್ಕೆ ಯಾವುದೇ ಸಮಯದ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಸಮಸ್ಯೆಯೆಂದರೆ ಇಂಡಿಯಾ ಬಣದ ಯಾವುದೇ ಸಭೆಯನ್ನು ಕರೆಯಲಾಗುತ್ತಿಲ್ಲ" ಎಂದರು.
ಪ್ರಮುಖ ನಾಯಕತ್ವ, ಪಕ್ಷ ಅಥವಾ ಭವಿಷ್ಯದ ಕಾರ್ಯತಂತ್ರಕ್ಕಾಗಿ(ಇಂಡಿಯಾ ಬಣದಲ್ಲಿ) ಕಾರ್ಯಸೂಚಿಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. "ಈ ಮೈತ್ರಿ ಮುಂದುವರಿಯುತ್ತದೆಯೇ ಎಂಬುದು ಸಹ ಸ್ಪಷ್ಟವಾಗಿಲ್ಲ" ಎಂದು ಹೇಳಿದರು.
ಇದೇ ವೇಳೆ ಮುಂದಿನ ತಿಂಗಳು ನಡೆಯಲಿರುವ ದೆಹಲಿ ಚುನಾವಣೆಗೆ ಮುನ್ನ ಎಎಪಿಗೆ ಬೆಂಬಲ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅಬ್ದುಲ್ಲಾ, "ದೆಹಲಿ ಚುನಾವಣೆಗೂ ನಮಗೂ ಯಾವುದೇ ಸಂಬಂಧವಿಲ್ಲ. ನಾನು ಈ ಬಗ್ಗೆ ಈಗ ಏನನ್ನೂ ಹೇಳಲಾರೆ. ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಬಿಜೆಪಿಯೊಂದಿಗೆ ಹೇಗೆ ಪ್ರಬಲವಾಗಿ ಸ್ಪರ್ಧಿಸಬೇಕೆಂದು ನಿರ್ಧರಿಸುತ್ತವೆ" ಎಂದರು.
Advertisement