
ವಾರಕ್ಕೆ 70 ಗಂಟೆಗಳು ದುಡಿಯಬೇಕೆಂಬ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಭಿಪ್ರಾಯಗಳ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಈ ವಿಷಯವಾಗಿ ಲಾರ್ಸನ್ ಆಂಡ್ ಟರ್ಬೊ (L&T) ಅಧ್ಯಕ್ಷರು ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ.
ಎಲ್&ಟಿ ಅಧ್ಯಕ್ಷ ಎಸ್ಎನ್ ಸುಬ್ರಹ್ಮಣ್ಯನ್ ಮಾತನಾಡಿರುವ ದಿನಾಂಕದ ಬಗ್ಗೆ ನಿಖರ ಮಾಹಿತಿ ಇಲ್ಲ. "ಭಾನುವಾರ ರಜೆ ನೀಡಿ, ನಿಮ್ಮಿಂದ ಕೆಲಸ ತೆಗೆಸಲು ಸಾಧ್ಯವಾಗದೆ ಇರುವುದಕ್ಕೆ ಬೇಸರವಾಗುತ್ತಿದೆ ಎಂದು ಸಂಸ್ಥೆಯ ಆಂತರಿಕ ಸಭೆಯದ್ದು ಎನ್ನಲಾಗುತ್ತಿರುವ ವಿಡಿಯೋದಲ್ಲಿ ಅವರು ಹೇಳಿರುವುದು ದಾಖಲಾಗಿದೆ.
ರೆಡ್ಡಿಟ್ ನಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಗ್ರಾಹಕರು ಸುಬ್ರಹ್ಮಣ್ಯನ್ ಅವರ ಹೇಳಿಕೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ಆಂತರಿಕ ಸಭೆಯಲ್ಲಿ ಶನಿವಾರಗಳನ್ನು ಕಡ್ಡಾಯ ಕೆಲಸದ ದಿನವನ್ನಾಗಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸುಬ್ರಹ್ಮಣ್ಯನ್, ನಿಮ್ಮನ್ನು ಭಾನುವಾರಗಳಂದು ಕೆಲಸಕ್ಕೆ ತೊಡಗಿಸದೇ ಇರುವುದಕ್ಕೆ ವಿಷಾದವಿದೆ. ನಿಮ್ಮನ್ನು ಭಾನುವಾರದಂದೂ ಕೆಲಸ ಮಾಡಿಸುವಂತಾದರೆ ಅದು ನನಗೆ ಹೆಚ್ಚಿನ ಖುಷಿ ಕೊಡುತ್ತದೆ. ಏಕೆಂದರೆ ನಾನೂ ಭಾನುವಾರಗಳಂದು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇಷ್ಟಕ್ಕೇ ನಿಲ್ಲದೇ ಭಾನುವಾರಗಳಂದು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ಎಷ್ಟು ಸಮಯದವರೆಗೂ ನಿಮ್ಮ ಹೆಂಡತಿಯನ್ನು ನೋಡುತ್ತಾ ಕುಳಿತಿರುತ್ತೀರಿ? ಹೆಂಡತಿಯರೂ ಅಷ್ಟೇ ಎಷ್ಟು ಅಂತ ಗಂಡನ ಮುಖ ನೋಡುತ್ತಾ ಕುಳಿತಿರಲು ಸಾಧ್ಯ? ಅದರ ಬದಲು ಕಚೇರಿಗೆ ಬಂದು ಕೆಲಸದಲ್ಲಿ ತೊಡಗಿ ಎಂದು ನೌಕರರಿಗೆ ಕರೆ ನೀಡಿದ್ದಾರೆ.
ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಚೀನಾದ ವ್ಯಕ್ತಿಯೊಬ್ಬನೊಂದಿಗೆ ಮಾತನಾಡಿದ ಉದಾಹರಣೆ ನೀಡಿರುವ ಸುಬ್ರಹ್ಮಣ್ಯನ್, ಅಮೇರಿಕಾವನ್ನು ಹಿಂದಿಕ್ಕುವುದಕ್ಕೆ ಚೀನಾಗೆ ಸಾಧ್ಯವಾಗಿರುವುದು ತೀವ್ರವಾದ ಕೆಲಸದ ಸಂಸ್ಕೃತಿಯೇ ಕಾರಣ ಎಂದು ಆತ ಹೇಳಿದ್ದಾಗಿ ತಿಳಿಸಿದ್ದಾರೆ.
ಚೀನಾದವರು ವಾರಕ್ಕೆ 90 ಗಂಟೆ ಕೆಲಸ ಮಾಡುತ್ತಾರೆ, ಅಮೇರಿಕನ್ನರು ವಾರಕ್ಕೆ 50 ಗಂಟೆಯಷ್ಟೇ ಕೆಲಸ ಮಾಡುತ್ತಾರೆ. ನಮ್ಮ ಸಂಸ್ಥೆಯ ನೌಕರರೂ ಸಹ ಇದೇ ರೀತಿಯಲ್ಲಿ ವಾರಕ್ಕೆ 90 ಗಂಟೆ ಕೆಲಸ ಮಾಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು ಹೇಳಿದ್ದಾರೆ. ಜಗತ್ತಿನಲ್ಲಿ ಅಗ್ರಸ್ಥಾನದಲ್ಲಿರಬೇಕೆಂದರೆ ನೀವು ವಾರಕ್ಕೆ 90 ಗಂಟೆ ಕೆಲಸ ಮಾಡುವುದು ಅತ್ಯಗತ್ಯ ಎಂದು ಸುಬ್ರಹ್ಮಣ್ಯನ್ ಅಭಿಪ್ರಾಯಪಟ್ಟಿದ್ದಾರೆ.
ಈ ವಿಡಿಯೋ ಬಗ್ಗೆ ಸಂಸ್ಥೆಯ ವಕ್ತಾರರೊಬ್ಬರು ಸಮರ್ಥನೆ ನೀಡಿದ್ದು, ಎಲ್&ಟಿಯಲ್ಲಿ ರಾಷ್ಟ್ರ ನಿರ್ಮಾಣ ನಮ್ಮ ಮೂಲತತ್ವವಾಗಿದೆ. 8 ದಶಕಕ್ಕೂ ಹೆಚ್ಚಿನ ಸಮಯದಿಂದ ನಾವು ಭಾರತದ ಮೂಲಸೌಕರ್ಯ, ಕೈಗಾರಿಕೆ, ತಾಂತ್ರಿಕ ಸಾಮರ್ಥ್ಯವನ್ನು ನಿರ್ಮಿಸುತ್ತಿದ್ದೇವೆ, ಇದು ಭಾರತಕ್ಕೆ ಸೇರಿದ ದಶಕ ಎಂದು ನಾವು ನಂಬಿದ್ದೇವೆ. ಇದು ಪ್ರಗತಿಯನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ನಮ್ಮ ಗುರಿಯನ್ನು ಸಾಕಾರಗೊಳಿಸಲು ಸಾಮೂಹಿಕ ಸಮರ್ಪಣೆ ಮತ್ತು ಪ್ರಯತ್ನದ ಅಗತ್ಯವಿರುವ ಸಮಯವಾಗಿದೆ. ಈ ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷರ ಹೇಳಿಕೆಗಳು ದೊಡ್ಡ ಮಹತ್ವಾಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ ಹಾಗೂ ಅಸಾಧಾರಣ ಫಲಿತಾಂಶಗಳಿಗೆ ಅಸಾಧಾರಣ ಪ್ರಯತ್ನದ ಅಗತ್ಯವಿದೆ ಎಂದು ಒತ್ತಿ ಹೇಳುತ್ತದೆ. ಎಲ್ & ಟಿ ಯಲ್ಲಿ, ಉತ್ಸಾಹ, ಉದ್ದೇಶ ಮತ್ತು ಕಾರ್ಯಕ್ಷಮತೆ ನಮ್ಮನ್ನು ಮುನ್ನಡೆಸುವ ಸಂಸ್ಕೃತಿಯನ್ನು ಬೆಳೆಸಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದ್ದಾರೆ.
Advertisement