
ಮುಂಬೈ: ವಿಪಕ್ಷಗಳ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಅತ್ಯಂತ ದೊಡ್ಡ ಪಕ್ಷವಾಗಿರುವುದರಿಂದ ಮೈತ್ರಿಯನ್ನು ಉಳಿಸಿಕೊಳ್ಳುವುದು ಅದರ ಜವಾಬ್ದಾರಿಯಾಗಿದೆ ಎಂದು ಶಿವಸೇನಾ- ಯುಬಿಟಿ ನಾಯಕ ಸಂಜಯ್ ರಾವತ್ ಶುಕ್ರವಾರ ಹೇಳಿದ್ದಾರೆ.
ಇಂಡಿಯಾ ಬಣದ ನಾಯಕತ್ವ ಮತ್ತು ಅಜೆಂಡಾ ಕುರಿತು ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಹೇಳಿಕೆ ನೀಡಿದ ಸಂಜಯ್ ರಾವತ್, ಮೈತ್ರಿಯನ್ನು 2024 ರ ಲೋಕಸಭಾ ಚುನಾವಣೆಗಾಗಿ ಮಾತ್ರ ಮಾಡಿಕೊಳ್ಳಲಾಗಿತ್ತು. ಈಗ ಅಸ್ತಿತ್ವದಲ್ಲಿಲ್ಲ ಎಂದು ಮೈತ್ರಿ ಪಕ್ಷಗಳು ಭಾವಿಸಿದರೆ, ಈ ಪರಿಸ್ಥಿತಿಗೆ ಕಾಂಗ್ರೆಸ್ ಅನ್ನು ದೂಷಿಸಬೇಕಾಗುತ್ತದೆ ಎಂದರು
ಪಕ್ಷಗಳ ನಡುವೆ ಯಾವುದೇ ಸಂವಹನ, ಮಾತುಕತೆ ನಡೆಯುತ್ತಿಲ್ಲ. ನಾವು ಹೋರಾಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಿದ್ದು, ಉತ್ತಮ ಫಲಿತಾಂಶ ಪಡೆದಿದ್ದೇವೆ. ಭವಿಷ್ಯದ ಯೋಜನೆಗಳನ್ನು ರೂಪಿಸಲು ಸಭೆ ನಡೆಯಬೇಕಿತ್ತು. ಈ ನಿಟ್ಟಿನಲ್ಲಿಕ್ರಮ ಕೈಗೊಳ್ಳುವುದು ಕಾಂಗ್ರೆಸ್‌ನ ಜವಾಬ್ದಾರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.
ಬಿಜೆಪಿ ವಿರೋಧಿ ಗುಂಪಿನ ಪಕ್ಷಗಳ ನಡುವಿನ ಸಂವಹನದ ಕೊರತೆಯು ಎರಡು ಡಜನ್‌ಗಿಂತಲೂ ಹೆಚ್ಚು ಪಕ್ಷಗಳನ್ನು ಹೊಂದಿರುವ ಬಣದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಅಭಿಪ್ರಾಯ ನೀಡುತ್ತದೆ. ಮೈತ್ರಿ ಪಕ್ಷಗಳ ನಡುವೆ ಯಾವುದೇ ಸಂವಹನ, ಮಾತುಕತೆ, ಚರ್ಚೆ ನಡೆಯುತ್ತಿಲ್ಲ. ಮೈತ್ರಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಎಲ್ಲರ ಮನದೊಳಗೆ ಕಾಡುತ್ತದೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ರೂಪುಗೊಂಡ ಮೈತ್ರಿ ಮುರಿದು ಬಿದ್ದರೆ ಅದನ್ನು ಪುನಶ್ಚೇತನಗೊಳಿಸಲು ಸಾಧ್ಯವಿಲ್ಲ ಎಂದು ರಾವತ್ ಎಚ್ಚರಿಸಿದ್ದಾರೆ.
ಒಂದು ವೇಳೆ ಮೈತ್ರಿ ಲೋಕಸಭೆ ಚುನಾವಣೆಗೆ ಮಾತ್ರ ಆಗಿದ್ದರೆ ಇಂಡಿಯಾ ಬಣವು ಅಸ್ತಿತ್ವದಲ್ಲಿಲ್ಲ ಎಂದು ಘೋಷಿಸಿದರೆ ಎಲ್ಲಾ ಮಿತ್ರಪಕ್ಷಗಳು ತಮ್ಮದೇ ಆದ ಮಾರ್ಗವನ್ನು ಆಯ್ಕೆ ಮಾಡಲು ಸ್ವತಂತ್ರವಾಗಿವೆ ಎಂದು ಶಿವಸೇನೆ-ಯುಬಿಟಿ ನಾಯಕ ಸಮರ್ಥಿಸಿಕೊಂಡಿದ್ದಾರೆ.
ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸೀಟು ಹಂಚಿಕೆ ಮಾತುಕತೆ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಕೆಲವು ಸ್ಥಾನಗಳಿಗೆ ಪಟ್ಟು ಹಿಡಿದರೂ ಕೇಂದ್ರದ ವರಿಷ್ಠರು ಮಧ್ಯ ಪ್ರವೇಶ ಮಾಡಿರಲಿಲ್ಲ. ಬಹಳ ಎಚ್ಚರಿಕೆಯಿಂದ ಸೀಟು ಹಂಚಿಕೆಯನ್ನು ಮಾಡಲಾಗಿತ್ತು ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ದೇಶ ವಿರೋಧಿ ಎಂದು ಕೆಲ ಕಾಂಗ್ರೆಸ್ ನಾಯಕರು ಕರೆಯುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಂಜಯ್ ರಾವತ್ ಸಮರ್ಥಿಸಿಕೊಂಡಿದ್ದಾರೆ.
Advertisement